ಕ್ರೀಡೆ

ನನಗೆ ಆ ರೀತಿಯ ಸಮಸ್ಯೆ ಏನಿಲ್ಲ! ಹೆಡ್ ಕೋಚ್ ಗ್ಯಾರಿ ಹೇಳಿಕೆಗೆ ಶಾಹೀನ್ ಅಫ್ರಿದಿ ಕೆಂಡಾಮಂಡಲ

ಮೋಹನ್​ ಶೆಟ್ಟಿ

ಲಾಹೋರ್​: ಟಿ20 ವಿಶ್ವಕಪ್​ ಟೂರ್ನಿಯ ಮೊಲದ ಹಂತದಲ್ಲೇ ಭಾರೀ ಮುಖಭಂಗ ಅನುಭವಿಸಿ ತವರಿಗೆ ವಾಪಾಸ್​ ಆದಗಿನಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಯಾವುದು ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಟೀಮ್​ನ ನಾಯಕತ್ವದ ಜವಾಬ್ದಾರಿ ಹೊರಲು ಬಾಬರ್​ ಆಜಂ ನಾಲಾಯಕ್​ ಎಂದೆಲ್ಲಾ ಟೀಕಿಸಿ ಮಾತನಾಡಿದ್ದ ಪಾಕ್​ ಮಾಜಿ ಆಟಗಾರರು, ಬಾಬರ್​​ರನ್ನು ಕ್ಯಾಪ್ಟನ್​ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಿಸಿಬಿಗೆ ಒತ್ತಾಯಿಸಿದ್ದರು. ತದನಂತರ ಪಾಕಿಸ್ತಾನ ಕ್ರಿಕೆಟ್​ನ ಹೆಡ್​ ಕೋಚ್ ಗ್ಯಾರಿ ಕರ್ಸ್ಟನ್, ತಂಡದಲ್ಲಿ ಆಟಗಾರರ ನಡುವೆ ಒಗ್ಗಟ್ಟಿಲ್ಲ, ಗೆಲುವಿನತ್ತ ಒಂದೇ ಮನಸ್ಥಿತಿ ಇಲ್ಲ ಎಂದು ದೂರಿದ್ದರು. ಆದ್ರೆ, ಅದ್ಯಾಕೋ ತಂಡದಲ್ಲಿನ ಆಂತರಿಕ ಸಮಸ್ಯೆಗಳು ದಿನೇ ದಿನೇ ಭುಗಿಲೇಳುತ್ತಿವೆಯೇ ಹೊರತು ಬಗೆಹರಿಯುವ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ.

ಕೋಚ್​ ಗ್ಯಾರಿ ಹೇಳಿದ್ದಿಷ್ಟು

ಪಾಕಿಸ್ತಾನದ ನೂತನ ಹೆಡ್​ ಕೋಚ್ ಆಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ನಾನಾ ಕಸರತ್ತು ನಡೆಸುತ್ತಿರುವ ಗ್ಯಾರಿ, ತಂಡದ ಆಟಗಾರರಿಗೆ ಪಾಠ ಹೇಳಲು ಹೋದರೆ, ಅವರ ಮಾತನ್ನು ಕೇಳಲು ಒಬ್ಬರಲ್ಲ ಮತ್ತೊಬ್ಬರು ನಿರಾಕರಿಸುತ್ತಲೇ ಇದ್ದಾರೆ. ಇದಕ್ಕೆ ಮತ್ತೊಂದು ಸಾಕ್ಷಿ ಶಾಹೀನ್ ಅಫ್ರಿದಿ. ಶಾಹೀನ್​ಗೆ ಕೆಲಸದ ಹೊರೆ ಸಮಸ್ಯೆಗಳನ್ನು ಹೆಚ್ಚಾಗುತ್ತಿವೆ. ಹೀಗಾಗಿ ಬೌಲರ್​ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಗ್ಯಾರಿ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಫ್ರಿದಿ, ಅಂತಹ ಯಾವ ಸಮಸ್ಯೆಯೂ ನನಗಿಲ್ಲ ಎಂದು ತಿರುಗೇಟು ನೀಡಿದರು.

ಅಫ್ರಿದಿ ಪ್ರತಿಕ್ರಿಯೆ

ಮಾತು ಮುಂದುವರೆಸಿದ ಅಫ್ರಿದಿ, “ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಅತಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ್ದೇನೆ ಎಂದು ನೀವು ನನಗೆ ಹೇಳುತ್ತಿದ್ದೀರಾ. ಹಾಗೆ ನೋಡಿದರೆ ಹಿರಿಯ ಮಾಜಿ ಕ್ರಿಕೆಟಿಗರಾದ ವಾಸೀಮ್ ಅಕ್ರಮ್ ಮತ್ತು ವಕಾರ್ ಯೂನಿಸ್, ತಮ್ಮ ಕಾಲದಲ್ಲಿ ಏನು ಮಾಡಿದರು ಎಂಬುದನ್ನು ನೀವೊಮ್ಮೆ ಗಮನಿಸಬೇಕು" ಎಂದು ಹೇಳಿದರು.

"ಆಗ ಯಾವುದೇ ಹೊರೆಯ ಸಮಸ್ಯೆ ಇರಲಿಲ್ಲ. ಕಳೆದ ವರ್ಷದಲ್ಲಿ ನಾವ್ಯಾಕೆ ಒತ್ತಡ ಮತ್ತು ಗಾಯಗಳ ಬಗ್ಗೆಯೇ ಚರ್ಚಿಸುತ್ತಿದ್ದೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ. ನೀವಿಲ್ಲಿ ಮಾನಸಿಕವಾಗಿ ಸದೃಢವಾಗಿರಬೇಕು ಅಷ್ಟೇ" ಎಂದು ಕೋಚ್​ ಮಾತಿಗೆ ಖಡಕ್​ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).