

ಎಲ್ಲೆಲ್ಲೂ ಈಗ ಕಲೆಬೆರಕೆ ಮತ್ತು ಕಳಪೆ ಗುಣಮಟ್ಟದ ಸಮಸ್ಯೆ ವ್ಯಾಪಿಸಿಕೊಂಡಿದೆ. ಆಹಾರಪದಾರ್ಥಗಳ ವಿಷಯದಲ್ಲಿ ವ್ಯಾಪಕವಾಗಿದ್ದ ಈ ಸಮಸ್ಯೆ, ಇತ್ತೀಚೆಗೆ ದೇವರ ಪ್ರಸಾದಕ್ಕೂ ವಿಸ್ತರಿಸಿತು. ಈಗ ಆತಂಕ ಪಡುವ ಸಂಗತಿ ಎಂದರೆ ಜ್ವರ, ತಲೆನೋವು ಎಂದು ಸಾಮಾನ್ಯವಾಗಿ ಬಳಸಲಾಗುವ ಔಷಧಗಳು ಕಳಪೆ ಎಂಬ ಸಂಗತಿ ಬೆಳಕಿಗೆ ಬಂದಿರುವುದು. ಹೌದು, ಸಾರ್ವಜನಿಕರು ಸಾಮಾನ್ಯವಾಗಿ ಉಪಯೋಗಿಸುತ್ತಿರುವ 50ಕ್ಕೂ ಹೆಚ್ಚು ಮಾತ್ರೆಗಳನ್ನು ಕಳಪೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಗುರುತಿಸಿದ್ದು, ಜನರು ಗಾಬರಿ ಪಡುವಂತಾಗಿದೆ. ದೇಶದ ಪ್ರಮುಖ ಫಾರ್ವ ಕಂಪನಿಗಳ 53 ಔಷಧಗಳು ಸರ್ಕಾರದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ. ಗುಣಮಟ್ಟ ವಿಫಲವಾದ ಔಷಧಗಳ ಪಟ್ಟಿಯನ್ನು ಸಿಡಿಎಸ್ಸಿಒ ಬಿಡುಗಡೆ ಮಾಡಿದ್ದು, ಇದರಲ್ಲಿ 53 ಔಷಧಗಳ ಬಗ್ಗೆ ಎಚ್ಚರಿಕೆ ನೀಡಿದೆ. ಇವುಗಳಲ್ಲಿ ರಕ್ತದೊತ್ತಡ (ಬಿಪಿ), ಆಸಿಡ್ ರೀಫ್ಲಕ್ಸ್ನಂತಹ ತೊಂದರೆಗಳಿಗೆ ತೆಗೆದುಕೊಳ್ಳುವ ಮಾತ್ರೆಗಳೂ ಇವೆ. ಪ್ರಯೋಗಾಲಯಗಳಲ್ಲಿ ಪ್ರತಿ ತಿಂಗಳು ನಡೆಸುವ ರ್ಯಾಂಡಮ್ ಸ್ಯಾಂಪಲ್ ಪರೀಕ್ಷೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಆಸಿಡಿಟಿ ನಿಯಂತ್ರಣಕ್ಕೆ ಬಳಸಲಾಗುವ ಪ್ಯಾನ್-ಡಿ, ಜ್ವರಕ್ಕೆ ನೀಡಲಾಗುವ ಪ್ಯಾರಾಸಿಟಮಲ್ ಐಪಿ 500 ಎಂಜಿ, ವಿಟಮಿನ್ ಸಿ ಮತ್ತು ಡಿ3 ಮಾತ್ರೆಗಳಾದ ಶೆಲ್ಕಾಲ್, ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ ಮಾತ್ರೆಗಳು ಸೇರಿದಂತೆ ಹಲವು ಫಾರ್ವ ಕಂಪನಿಗಳ ಔಷಧಗಳು ಈ ಪಟ್ಟಿಯಲ್ಲಿವೆ.
ಈ ಕಳಪೆ ಔಷಧಗಳಿಂದ ಜನರ ಆರೋಗ್ಯ ಹದಗೆಡುವುದಷ್ಟೇ ಅಲ್ಲ, ಔಷಧ ತಯಾರಿಕಾ ಉದ್ಯಮದ ಮೇಲೆ ಜನ ಇಟ್ಟಿರುವ ನಂಬಿಕೆಗೂ ಧಕ್ಕೆಯಾಗುತ್ತದೆ. ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಕಂಪನಿಗಳ ವಿರುದ್ಧ, ಇದಕ್ಕೆ ಕೈಜೋಡಿಸಿರುವ ಶಕ್ತಿಗಳ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಮತ್ತು ಕಳಪೆ ಔಷಧಗಳ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು. ಕಳಪೆ ಔಷಧದ ಈ ಪಿಡುಗನ್ನು ಮಟ್ಟ ಹಾಕಲು ಸರ್ಕಾರ, ಔಷಧ ನಿಯಂತ್ರಣ ಸಂಸ್ಥೆಗಳು, ಔಷಧ ಮಾರಾಟ ಕಂಪನಿಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ. ಇದಕ್ಕೂ ಮುನ್ನ ಆಗಸ್ಟ್ನಲ್ಲಿ 156 ನಿಶ್ಚಿತ ಔಷಧ ಡೋಸ್ ಸಂಯೋಜನೆಗೆ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ನಿಷೇಧ ಹೇರಿತ್ತು ಎಂಬುದು ಗಮನಾರ್ಹ.
ಔಷಧ ತಯಾರಿಕಾ ಕಂಪನಿಗಳು ತಾವು ತಯಾರಿಸುವ ಉತ್ಪನ್ನಗಳ ಗುಣಮಟ್ಟಕ್ಕೆ ಉತ್ತರದಾಯಿ ಆಗಿರಬೇಕು. ನಕಲಿ ಔಷಧಗಳನ್ನು ಪತ್ತೆಹಚ್ಚಲು ಮತ್ತು ಮಾರುಕಟ್ಟೆಯಿಂದ ಹಿಂಪಡೆಯಲು ನಿಯಂತ್ರಕ ಸಂಸ್ಥೆಗಳೊಂದಿಗೆ ನಿಕಟವಾಗಿ ಸಹಕರಿಸಬೇಕು. ನಕಲಿ ಔಷಧಗಳ ಈ ಸಮಸ್ಯೆಯನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನ ಮತ್ತು ಇಚ್ಛಾಶಕ್ತಿ ಅಗತ್ಯ. ಈ ಬಹುಮುಖಿ ಸವಾಲಿನ ವಿರುದ್ಧ ನಿಯಂತ್ರಣ ಸಂಸ್ಥೆಗಳು, ಔಷಧ ಉದ್ಯಮ ಮತ್ತು ಸರ್ಕಾರ ಒಟ್ಟಾಗಿ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಗಳು ಮಾರುಕಟ್ಟೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು, ಆ ಮೂಲಕ ಜನರ, ಸಮಾಜದ ಆರೋಗ್ಯವನ್ನು ರಕ್ಷಿಸುವುದು ಅಗತ್ಯವಾಗಿದೆ. ಈ ಪಿಡುಗು ಮುಂದುವರಿಯದಂತೆ, ಗುಣಮಟ್ಟದ ಔಷಧಗಳು ಮಾತ್ರ ಮಾರುಕಟ್ಟೆ ಪ್ರವೇಶಿಸುವಂತೆ ಮಾಡಲು ನಿಗಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.