ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಸಿದ್ಧತೆ ದೃಷ್ಟಿಯಿಂದ ಹಲವು ಟೂರ್ನಿಗಳಲ್ಲಿ ಸ್ಪರ್ಧಿಸುವ ಸಲುವಾಗಿ ಭಾರತದ ಸ್ಟಾರ್ ಟೆನಿಸ್ ಪಟು ಸಾನಿಯಾ ಮಿರ್ಜಾ ಶೀಘ್ರವೇ ಬ್ರಿಟನ್ಗೆ ತೆರಳಲಿದ್ದಾರೆ. ಈ ವೇಳೆಗೆ ಸಾನಿಯಾ ಮಿರ್ಜಾ ಅವರ ಎರಡು ವರ್ಷದ ಪುತ್ರನನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಾನಿಯಾ ಪುತ್ರನಿಗೆ ಬ್ರಿಟನ್ ಸರ್ಕಾರದಿಂದ ವೀಸಾ ಕೊಡಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯವೂ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದೆ. ಜೂನ್ ತಿಂಗಳಲ್ಲಿ ಸಾನಿಯಾ ಮಿರ್ಜಾ 4 ಟೂನಿರ್ಗಳಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.
ಜೂನ್ 6 ರಿಂದ ನಾಟಿಂಗ್ಹ್ಯಾಂ ಓಪನ್, ಜೂನ್ 14 ರಿಂದ ರ್ಬಮಿಂಗ್ಹ್ಯಾಂ ಓಪನ್, ಜೂನ್ 20 ರಿಂದ ಈಸ್ಟ್ಬೌರ್ನೆ ಓಪನ್ ಹಾಗೂ ಜೂನ್ 28 ರಿಂದ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗಳಲ್ಲಿ ಸಾನಿಯಾ ಮಿರ್ಜಾ ಸ್ಪರ್ಧಿಸಲಿದ್ದಾರೆ. ಸಾನಿಯಾ ಮಿರ್ಜಾಗೆ ನಾಟಿಂಗ್ಹ್ಯಾಂಗೆ ತೆರಳಲು ವೀಸಾ ಲಭಿಸಿದೆ. ಅದರೆ, ಸಾನಿಯಾ ಪುತ್ರ ಹಾಗೂ ಅವನ ಉಸ್ತುವಾರಿ ವಹಿಸಿಕೊಳ್ಳುವವರಿಗೆ ವೀಸಾ ದಕ್ಕಿಲ್ಲ. ಭಾರತದ ಪ್ರವಾಸಿಗರಿಗೆ ಇಂಗ್ಲೆಂಡ್ನಲ್ಲಿ ನಿರ್ಬಂಧ ವಿಧಿಸಿರುವುದೇ ಇದಕ್ಕೆ ಕಾರಣ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ. ಸಾನಿಯಾ ಮಿರ್ಜಾ ಕೂಡ ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ (ಟಾಪ್ಸ್) ಭಾಗವಾಗಿದ್ದಾರೆ. ಮಗ ಹಾಗೂ ಮಗನ ಉಸ್ತುವಾರಿ ವಹಿಸುವವರಿಗೆ ವೀಸಾ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಕಿರಣ್ ರಿಜಿಜು, ಸಾನಿಯಾ ಮಿರ್ಜಾ ಮನವಿಯನ್ನು ಸ್ವೀಕರಿಸಿದ್ದು, ತಾಯಿಯೊಂದಿಗೆ ಮಗು ಬ್ರಿಟನ್ಗೆ ತೆರಳಬೇಕು ಎಂಬುದೇ ನಮ್ಮ ಆಶಯ. ಸಾನಿಯಾ ಅಲ್ಲಿ ಉತ್ತಮವಾಗಿ ಆಡಬೇಕೆಂದರೆ ಮಗನ ಉಪಸ್ಥಿತಿ ಅತ್ಯಗತ್ಯ. ಈ ಕುರಿತು ವಿದೇಶಾಂಗ ಸಚಿವಾಯಲದ ಮುಖಾಂತರ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸಚಿವರು ತಿಳಿಸಿದರು.