ಕ್ರೀಡೆ

ಇವರಿಂದಲೇ ನನ್ನ ಮಗ... ದ್ರಾವಿಡ್​, ಧೋನಿ, ರೋಹಿತ್​, ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ ಸಂಜು ಸ್ಯಾಮ್ಸನ್​ ತಂದೆ! Sanju Samson

Sanju Samson : ಕಳೆದ ಶುಕ್ರವಾರ (ನ.08) ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ 61 ರನ್​ಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಕೇವಲ 47 ಎಸೆತಗಳಲ್ಲಿ ಸಂಜು ಸ್ಯಾಮ್ಸನ್​ ಸಿಡಿಸಿದ ಸ್ಫೋಟಕ ಶತಕವೇ ಗೆಲುವಿಗೆ ಕಾರಣ.

50 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸರ್‌ಗಳೊಂದಿಗೆ 107 ರನ್ ಗಳಿಸಿ ಸಂಜು ಸ್ಯಾಮ್ಸನ್​ ಔಟಾದರು. ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಸಂಜು ಪಾತ್ರರಾದರು. ಆದರೆ, ಇದಕ್ಕೂ ಮುನ್ನ ಸಂಜು ಸಾಲು ಸಾಲು ವೈಫಲ್ಯಗಳನ್ನು ಅನುಭವಿಸಿದ್ದರು.

ಅಂದಹಾಗೆ ಸಂಜುವಿನ ತಂದೆ ಸ್ಯಾಮ್ಸನ್​ ವಿಶ್ವನಾಥ್​ ಅವರು ತನ್ನ ಮಗನ ಸಾಧನೆಯ ಬಗ್ಗೆ ಎಲ್ಲರು ಹೊಗಳುತ್ತಿರುವನ್ನು ಕೇಳಿ ಒಂದು ಕಡೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಮಗನ ಕಷ್ಟದ ಹಾದಿಗಳನ್ನು ನೆನೆದು ಟೀಮ್​ ಇಂಡಿಯಾದ ಕೆಲ ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕಿದರು. ಮಾಜಿ ನಾಯಕರಾದ ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಕೈಯಲ್ಲಿ ಸಂಜು ಅನುಭವಿಸಿದ ಅವಮಾನವನ್ನು ನೆನಪಿಸಿಕೊಂಡರು.

ಸ್ಯಾಮ್ಸನ್ ವಿಶ್ವನಾಥ್ ಅವರ ಪ್ರಕಾರ, ಸಂಜು ಅವರ ಕ್ರಿಕೆಟ್​ ಜೀವನದ ಪ್ರಮುಖ ಹತ್ತು ವರ್ಷಗಳನ್ನು ಹಾಳುಮಾಡಲು ಅನುಭವಿಗಳಾದ ರಾಹುಲ್ ದ್ರಾವಿಡ್, ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕಾರಣ ಎಂದು ಹೇಳಿದರು. ಸತತ ವೈಫಲ್ಯದ ಬಳಿಕವೂ ತಮ್ಮ ಮಗನ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಕೋಚ್​ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಟಿ20ಯಲ್ಲಿ ಬ್ಯಾಕ್​ ಟು ಬ್ಯಾಕ್​ ಬಾರಿಸಿದ ಎರಡು ಶತಕಗಳನ್ನು ಅವರಿಗೆ ಅರ್ಪಿಸಿದರು.

ನನ್ನ ಮಗನ ಹತ್ತು ವರ್ಷಗಳನ್ನು ಹಾಳು ಮಾಡಿದವರು ನಿಜವಾಗಿಯೂ ಕ್ರೀಡಾ ವೃತ್ತಿಪರರಲ್ಲ. ಅವರು ನೋಯಿಸಿದಷ್ಟೂ ಸಂಜು ಬಿಕ್ಕಟ್ಟಿನಿಂದ ಹೊರಬಂದರು. ಮುಂಬರುವ ವರ್ಷಗಳು ಅವನದ್ದಾಗಿರುತ್ತವೆ ಮತ್ತು ಕಳೆದುಹೋದ ಹತ್ತು ವರ್ಷಗಳನ್ನು ಅವನು ಸರಿದೂಗಿಸುತ್ತಾನೆ. ಸಂಜು ಅವರ ಬ್ಯಾಟಿಂಗ್ ಕ್ಲಾಸಿಕ್ ಟಚ್ ಪಡೆದುಕೊಂಡಿದೆ. ಅವರ ಶೈಲಿಯು ಸಚಿನ್ ಮತ್ತು ದ್ರಾವಿಡ್ ಆಟದ ನೆನಪುಗಳನ್ನು ತರುತ್ತದೆ ಎಂದು ಸ್ಯಾಮ್ಸನ್ ವಿಶ್ವನಾಥ್ ಹೇಳಿದರು.

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆ (ನ.10) ನಡೆದ ಎರಡನೇ ಟಿ20 ಪಂದ್ಯದಲ್ಲಿ ಸ್ಯಾಮ್ಸನ್​ ಡಕೌಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು. ಸೇಂಟ್ ಜಾರ್ಜ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಕಂಡರು. ಆಗ ಆಸರೆಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (39* ರನ್, 45 ಎಸೆತ, 4 ಬೌಂಡರಿ, 1 ಸಿಕ್ಸರ್) ಹೋರಾಟದಿಂದ 6 ವಿಕೆಟ್‌ಗೆ 124 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ವರುಣ್ ಚಕ್ರವರ್ತಿ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 89 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಟ್ರಿಸ್ಟಾನ್ ಸ್ಟಬ್ಸ್- ಕೋಟ್‌ಜೀ ನಡೆಸಿದ ಜತೆಯಾಟದ ನೆರವಿನಿಂದ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 128 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು. (ಏಜೆನ್ಸೀಸ್​)