ಹೈದರಾಬಾದ್: ವಿವಾದಾತ್ಮಕ ಹೇಳಿಕೆ ನೀಡಿ ಬಂಧನ ಭೀತಿ ಎದುರಿಸುತ್ತಿರುವ ನಟಿ ಕಸ್ತೂರಿ ಶಂಕರ್ ( Kasthuri Shankar ) , ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ. ಕಸ್ತೂರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲಿ ಸೌತ್ ಬ್ಯೂಟಿ ಬಂಧನವಾಗುವ ಸಾಧ್ಯತೆ ಇದೆ.
ಏನಿದು ವಿವಾದ?
ನವೆಂಬರ್ 3 ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಬಲಪಂಥೀಯ ಸಂಘಟನೆಯಾದ ಹಿಂದು ಮಕ್ಕಳ್ ಕಚ್ಚಿ (ಎಚ್‌ಎಂಕೆ) ಸಂಸ್ಥಾಪಕ ಅರ್ಜುನ್ ಸಂಪತ್ ಆಯೋಜಿಸಿದ್ದ ಸಮಾವೇಶದಲ್ಲಿ ಅಸ್ಪೃಶ್ಯತೆಯಂತಹ ಜಾತಿ ಪದ್ಧತಿಯನ್ನು ರದ್ದುಗೊಳಿಸಿರುವ ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್) ಕಾಯ್ದೆಯ ಅಡಿಯಲ್ಲಿ ಬ್ರಾಹ್ಮಣರಿಗೂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಮಾವೇಶದಲ್ಲಿ ಮಾತನಾಡಿದ ಕಸ್ತೂರಿ, 300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದಿದ್ದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಇದು ತಮಿಳು ಮತ್ತು ತೆಲುಗು ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಯಿತು.
ತಮ್ಮ ಮಾತುಗಳು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಆಡಳಿತಾರೂಢ ಡಿಎಂಕೆ ತನ್ನ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಕಸ್ತೂತಿ ಆರೋಪಿಸಿದರು. ಅಲ್ಲದೆ, ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ನಾನು ತೆಲುಗು ಭಾಷೆಯೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವುದು ನನ್ನ ಸೌಭಾಗ್ಯ. ತೆಲುಗು ಜನ ನನಗೆ ಹೆಸರು, ಪ್ರತಿಷ್ಠೆ, ಕುಟುಂಬವನ್ನು ಕೊಟ್ಟಿದ್ದಾರೆ. ವಿಶೇಷವಾಗಿ ನಾನು ಕೆಲವರ ಬಗ್ಗೆ ಮಾತನಾಡಿದ್ದೇನೆಯೇ ಹೊರತು. ಎಲ್ಲ ತೆಲುಗಿನವರ ಬಗ್ಗೆ ಅಲ್ಲ. ನನ್ನ ಮಾತಿನ ಮೂಲಕ ತೆಲುಗು ಕುಟುಂಬಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ ಎಂದು ಕ್ಷಮೆಯಾಚಿಸಿದರು. ಆದರೆ, ತೆಲುಗು ಜನರ ವಿರುದ್ಧ ಅನುಚಿತ ಕಾಮೆಂಟ್ ಮಾಡಿದ ನಂತರ ಕಸ್ತೂರಿ ವಿರುದ್ಧ ಚೆನ್ನೈ, ಮಧುರೈ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ.
ಇದಿಷ್ಟೇ ಅಲ್ಲದೆ, ಸರ್ಕಾರಿ ನೌಕರರಲ್ಲಿ ಬ್ರಾಹ್ಮಣೇತರರು ಲಂಚ ಪಡೆಯುತ್ತಿದ್ದಾರೆ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆ ಸಹ ನೀಡಿದ್ದರು. ಕಸ್ತೂರಿ ಅವರ ಈ ಹೇಳಿಕೆಯನ್ನು ಸರ್ಕಾರಿ ನೌಕರರ ಸಂಘಗಳು ತಳ್ಳಿಹಾಕಿವೆ. ನಟಿ ಕಸ್ತೂರಿ ಅವರ ಹೇಳಿಕೆಗಳು ಸರ್ಕಾರಿ ನೌಕರರ ಕೆಲವು ವರ್ಗಗಳ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿವೆ ಎಂದು ತಮಿಳುನಾಡು ಕಂದಾಯ ಅಧಿಕಾರಿಗಳ ಸಂಘ ನಟಿ ಕಸ್ತೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ, ಕಸ್ತೂರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿತ್ತು. ಇದರೊಂದಿಗೆ ಆಕೆಯ ವಿರುದ್ಧ ಚೆನ್ನೈನ ಹಲವು ಠಾಣೆಗಳಲ್ಲಿ ಪ್ರಕರಣಗಳು ಸಹ ದಾಖಲಾಗಿವೆ.
ಕಸ್ತೂರಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ಸಮನ್ಸ್ ನೀಡಲು ಚೆನ್ನೈ ಪೊಲೀಸರು ಕಸ್ತೂರಿ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಆಕೆಯ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಫೋನ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಪೊಲೀಸರು ಸದ್ಯ ಆಕೆಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಸ್ತೂರಿ ತಮಿಳುನಾಡು ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪತ್ತೆಯಾದಲ್ಲಿ ಕಸ್ತೂರಿ ಅವರು ಬಂಧನವಾಗುವ ಸಾಧ್ಯತೆ ಇದೆ.
ಅಂದಹಾಗೆ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.
ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ. ತಮ್ಮ ಮುಕ್ತವಾದ ಮಾತುಗಳಿಂದಲೇ ಕಸ್ತೂರಿ ಅವರು ಆಗಾಗ ವಿವಾದಕ್ಕೆ ಗುರಿಯಾಗುತ್ತಿರುತ್ತಾರೆ. ಇದೀಗ ಮತ್ತೊಂದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿಕೊಂಡಿದ್ದಾರೆ.
ಪ್ರಸ್ತುತ ಕಸ್ತೂರಿ ಶಂಕರ್ ಅವರು ಪ್ರಸ್ತುತ ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್)
ನಟಿ ಕಸ್ತೂರಿ ವಿರುದ್ಧ ಸಿಡಿದೆದ್ದ ಸರ್ಕಾರಿ ನೌಕರರು! ಸೌತ್ ಬ್ಯೂಟಿಗೆ ಶುರುವಾಯ್ತು ಬಂಧನ ಭೀತಿ | Kasthuri Shankar