ಬೆಂಗಳೂರು: ಐಪಿಎಲ್ 17ನೇ ಆವೃತ್ತಿ ಅಂತ್ಯಕ್ಕೆ ಇನ್ನೇನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮೂಡಿರುವುದು ಕೇವಲ ಇಂದು (ಮೇ.18) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯದ ಮೇಲೆ ಮಾತ್ರ. ಈ ಪಂದ್ಯ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದ್ದು, ಯಾರು ಪ್ಲೇಆಫ್ಗೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ ಎಂಬುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಆರ್ಸಿಬಿ ಮತ್ತು ಸಿಎಸ್ಕೆಯ ಮಾಡು ಇಲ್ಲವೇ ಮಡಿ ಪಂದ್ಯದ ಟಿಕೆಟ್ ದರ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಕ್ರಿಕೆಟ್ ಫ್ಯಾನ್ಸ್ ಕಂಗಾಲಾಗಿದ್ದಾರೆ.
ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ರಾಜಸ್ಥಾನ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ಭದ್ರಪಡಿಸಿಕೊಂಡಿದೆ. ಈಗ ಉಳಿದಿರುವುದು ನಾಲ್ಕನೇ ಸ್ಥಾನ ಮಾತ್ರ. ಸದ್ಯ ಈ ಜಾಗವನ್ನು ಯಾರು ತುಂಬಲಿದ್ದಾರೆ ಎಂಬುದು ಇಂದಿನ ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದಲ್ಲಿ ನಿಖರವಾಗಿ ತಿಳಿಯುತ್ತದೆ. ಸದ್ಯ ಪ್ಲೇಆಫ್ ಪ್ರವೇಶಿಸಲು ಚೆನ್ನೈ ಪಡೆ ತುದಿಗಾಲಿನಲ್ಲಿ ನಿಂತಿದೆ. ಆದರೆ, ಫಾಫ್ ಪಡೆಗೆ ಮಾತ್ರ ಕೆಲವು ಕಷ್ಟಕರ ಹಂತಗಳನ್ನು ಬೇಧಿಸಿಕೊಂಡು ಹೋಗುವ ಕಠಿಣ ಪರಿಸ್ಥಿತಿಗಳಿವೆ.
ಹವಾಮಾನ ಇಲಾಖೆಯ ಪ್ರಕಾರ, ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ. ಅದು ಕೂಡ ಸಂಜೆಯ ನಂತರವೇ ಎಂಬ ಸಂಗತಿ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ. ಒಂದೆಡೆ ಮಳೆ ಸುರಿದರೆ ಸಿಎಸ್ಕೆಗೆ ಯಾವ ರೀತಿಯಲ್ಲೂ ತೊಂದರೆಯಿಲ್ಲ. ಆದರೆ, ಆರ್ಸಿಬಿಗೆ ಮಾತ್ರ ಇದು ಶಾಪವಾಗಿ ಮಾರ್ಪಡುವುದು ಖಚಿತ. ಇನ್ನೂ ಈ ಗೊಂದಲದಲ್ಲಿರುವ ಅಪಾರ ಸಂಖ್ಯೆಯ ಆರ್ಸಿಬಿ ಫ್ಯಾನ್ಸ್ಗಳು, ಮಳೆ ಬರಲಿ, ಹೋಗಲಿ ನಮಗೆ ಮ್ಯಾಚ್ ನೋಡುವುದು ಮುಖ್ಯ, ಗೆಲುವು ಅತೀ ಮುಖ್ಯ ಎಂದು ದುಬಾರಿ ಬೆಲೆಯ ಟಿಕೆಟ್ ಖರೀದಿಸಿದ್ದಾರೆ.
ವರದಿಗಳ ಪ್ರಕಾರ, 3000 ರೂ. ದರವಿದ್ದ ಟಿಕೆಟ್ಗಳು 20,000 ರೂ.ಗೆ ಮಾರಾಟವಾಗಿದ್ದು, ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದೊಡ್ಡಿದೆ. ಈಗಾಗಲೇ ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗಿದ್ದು, ಬ್ಲ್ಯಾಕ್ನಲ್ಲಿ ಟಿಕೆಟ್ಗಳನ್ನು ದುಬಾರಿ ಬೆಲೆಗೆ ವ್ಯಾಪಾರವಾಗಿದೆ ಎಂದು ಹೇಳಲಾಗಿದೆ. ಈ ವಿಷಯದಲ್ಲಿ ಆಡಳಿತ ಮಂಡಳಿಯೂ ಕೈಜೋಡಿಸಿದೆ ಎಂದು ಆರ್ಸಿಬಿ ಅಭಿಮಾನಿಗಳು ಆರೋಪಿಸಿದ್ದಾರೆ,(ಏಜೆನ್ಸೀಸ್).