ಕ್ರೀಡೆ

ಗುಜರಾತ್​ ವಿರುದ್ಧ ಗೆಲುವಿನ ಬೆನ್ನಲ್ಲೇ ಐತಿಹಾಸಿಕ ದಾಖಲೆ ಬರೆದ ಪಂಜಾಬ್​ ಕಿಂಗ್ಸ್

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಸಕ್ತ ಐಪಿಎಲ್​ ಟೂರ್ನಿಯ 17ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ದ ಪಂದ್ಯದಲ್ಲಿ ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ ಪಂಜಾಬ್​ ಕಿಂಗ್ಸ್​ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಶಿಖರ್​ ಧವನ್​ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಗುಜರಾತ್​ ತಂಡ ತವರು ಅಂಗಣದಲ್ಲಿ ಮೊದಲ ಸೋಲು ಅನುಭವಿಸಿತು.

ಮೊದಲ ಸೀಸನ್​ನಿಂದಲೂ ಐಪಿಎಲ್​ ಆಡುತ್ತ ಬಂದಿರುವ ಪಂಜಾಬ್​ ಕಿಂಗ್ಸ್​ ಟ್ರೋಫಿ ಗೆಲ್ಲದೇ ಟೂರ್ನಿಯಲ್ಲಿ ಯಾವ ತಂಡದ ಕೈಯಲ್ಲೂ ಮಾಡದ ಸಾಧನೆಯನ್ನು ಮಾಡಿ ತೋರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ನಿನ್ನೆಯ (ಏಪ್ರಿಲ್ 04) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಅಧಿಕ ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳಿಗೂ ಮಾಡಲು ಸಾಧ್ಯವಾಗದ ಸಾಧನೆಯನ್ನು ಮಾಡಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 200 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಐಪಿಎಲ್​ ಇತಿಹಾಸದಲ್ಲೇ 200 ಕ್ಕೂ ಹೆಚ್ಚು ರನ್​ಗಳ ಗುರಿಯನ್ನು ಅಧಿಕ ಬಾರಿ ಬೆನ್ನಟ್ಟಿದ ತಂಡ ಎಂಬ ದಾಖಲೆ ಬರೆದಿದೆ. ಗುಜರಾತ್ ತಂಡ ನೀಡಿದ 200 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ ಐಪಿಎಲ್‌ನಲ್ಲಿ ಆರನೇ ಬಾರಿಗೆ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದೆ. ಮೊದಲನೆಯದಾಗಿ 2010ರಲ್ಲಿ 200 ರನ್​ಗಳ ಗುರಿಯನ್ನು ಪಂಜಾಬ್​ ಬೆನ್ನಟ್ಟಿತ್ತು.

2014ರಲ್ಲಿ ಹೈದರಾಬಾದ್ ಹಾಗೂ ಚೆನ್ನೈ ವಿರುದ್ಧ, 2022ರಲ್ಲಿ ಆರ್​ಸಿಬಿ ವಿರುದ್ಧ, 2023ರಲ್ಲಿ ಚೆನ್ನೈ ವಿರುದ್ಧ 200 ಹಾಗೂ ಅದಕ್ಕಿಂತ ಹೆಚ್ಚಿನ ಮೊತತ್ವನ್ನು ಬೆನ್ನಟ್ಟಿ ಗೆಲುವಿನ ನಗೆ ಬೀರಿತ್ತು. ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ತಂಡಗಳು 200 ರನ್‌ಗಳ ಗುರಿಯನ್ನು 5 ಬಾರಿ ಬೆನ್ನಟ್ಟಿವೆ. ಅವುಗಳಲ್ಲಿ 5 ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 200 ಅಥವಾ ಅದಕ್ಕಿಂತ ಹೆಚ್ಚಿನ ಗುರಿಯನ್ನು 5 ಬಾರಿ ಬೆನ್ನಟ್ಟಿ ಗೆಲುವು ಸಾಧಿಸಿದೆ. 2023ರ ಐಪಿಎಲ್​ನಲ್ಲಿ ಮುಂಬೈ ಮೂರು ಬಾರಿ 200 ಕ್ಕಿಂತ ಹೆಚ್ಚು ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತ್ತು.