ನವದೆಹಲಿ: ಕರೊನಾ ವೈರಸ್ ಎರಡನೇ ಅಲೆಯೂ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಹಲವು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ನೆಚ್ಚಿನ ಮಂದಿಯನ್ನು ಕಳೆದುಕೊಂಡಿರುವ ಸಂಬಂಧಿಕರ ರೋಧನ ಹೇಳತೀರದು. ಭಾರತ ತಂಡದ ಆಟಗಾರ್ತಿಯರಾದ ಕರ್ನಾಟಕದ ವೇದಾ ಕೃಷ್ಣ ಮೂರ್ತಿ ಹಾಗೂ ಪ್ರಿಯಾ ಪೂನಿಯಾ ಇತ್ತೀಚೆಗೆ ಕೋವಿಡ್ನಿಂದ ತಮ್ಮ ತಾಯಂದಿರನ್ನು ಕಳೆದುಕೊಂಡಿದ್ದರು. ಪ್ರಿಯಾ ಪೂನಿಯಾ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ತಾಯಿ ಕಳೆದುಕೊಂಡ ನೋವಿನಲ್ಲಿದ್ದ ಪ್ರಿಯಾಗೆ ವೃತ್ತಿ ಜೀವನದತ್ತ ಗಮನ ಹರಿಸುವಂತೆ ತಂದೆ ಸುರೇಂದ್ರ ಸಲಹೆ ನೀಡಿದ್ದಾರೆ. ಇದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಆದರ್ಶವನ್ನಾಗಿ ಸ್ವೀಕರಿಸುವಂತೆ ಹೇಳಿದ್ದಾರೆ.
ತಾಯಿ ಕಳೆದುಕೊಂಡ ಕೆಲದಿನಗಳಲ್ಲೇ ಪೂನಿಯಾ ಮೇ 19 ರಂದು ಮುಂಬೈನಲ್ಲಿ ರಾಷ್ಟ್ರೀಯ ತಂಡ ಕೂಡಿಕೊಂಡಿದ್ದಾರೆ. ಈ ವೇಳೆ ಪ್ರಿಯಾ ಪುನಿಯಾ ತಂದೆ ಮಗಳಿಗೆ ವಿರಾಟ್ ಕೊಹ್ಲಿಯನ್ನು ಉದಾಹರಣೆ ನೀಡಿ ಇಂಗ್ಲೆಂಡ್ಗೆ ತೆರಳುವಂತೆ ಹೇಳಿದ್ದಾರೆ. ವಿರಾಟ್ ಕೊಹ್ಲಿ 2006ರ ಡಿಸೆಂಬರ್ 18 ರಂದು ತಂದೆ ಕಳೆದುಕೊಂಡಿದ್ದರೂ ಮರು ದಿನವೇ ದೆಹಲಿ ಪರ ರಣಜಿ ಪಂದ್ಯವಾಡಲು ಮೈದಾನಕ್ಕಿಳಿದಿದ್ದರು. ಹೀಗೆ ಕೊಹ್ಲಿ ಎದುರಿಸಿದ ಸಂಕಷ್ಟದ ಸನ್ನಿವೇಶವನ್ನು ತಂದೆ ಮಗಳಿಗೆ ವಿವರಿಸಿದ್ದಾರೆ. ಬಳಿಕ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮಗಳು ಒಪ್ಪಿಗೆ ಸೂಚಿಸಿದಳು ಎಂದು ಸುರೇಂದ್ರ ಹೇಳಿದ್ದಾರೆ.
ತಾಯಿ ಕಳೆದುಕೊಂಡ ಬಳಿಕ ಪ್ರಿಯಾ ಪೂನಿಯಾ ಭಾವನಾತ್ಮಕವಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು. ಭಾರತ ಮಹಿಳಾ ತಂಡ ಸದ್ಯ ಮುಂಬೈನಲ್ಲಿ ಕ್ವಾರಂಟೈನಲ್ಲಿದ್ದು, ಜೂನ್ 2 ರಂದು ಲಂಡನ್ನತ್ತ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್ನಲ್ಲಿ ಏಕೈಕ ಟೆಸ್ಟ್, ತಲಾ 3 ಏಕದಿನ, 3 ಟಿ20 ಪಂದ್ಯಗಳನ್ನಾಡಿದೆ.