

ನವದೆಹಲಿ: ಭಾರತ ಮಹಿಳಾ ತಂಡ ಮುಂಬರುವ ಆಸ್ಟ್ರೆಲಿಯಾ ಪ್ರವಾಸದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3ರವರೆಗೆ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನಾಡಲಿದೆ. ಪರ್ತ್ನಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ಮಹಿಳಾ ತಂಡ ಇದುವರೆಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಿಲ್ಲ. ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಮಂಡಳಿ ಎಲ್ಲ ರೀತಿಯ ಸಹಾಕರ ನೀಡಲಿದೆ. ಭಾರತ ಮಹಿಳಾ ತಂಡ ಮೊಟ್ಟ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಸ್ಪಷ್ಟ ಪಡಿಸಿದ್ದಾರೆ.
ಭಾರತ ಮಹಿಳಾ ತಂಡ 7 ವರ್ಷಗಳ ಬಳಿಕ ಮುಂದಿನ ತಿಂಗಳು ಟೆಸ್ಟ್ ಪಂದ್ಯವನ್ನಾಡಲಿದೆ. ಜೂನ್ 16 ರಿಂದ ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯನ್ನಾಡಲಿದ್ದು, ಇದಾದ ಬಳಿಕ ಭಾರತ ತಂಡ ಆಸ್ಟ್ರೆಲಿಯಾ ಪ್ರವಾಸದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯವನ್ನಾಡಲಿದೆ. ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ 3 ಏಕದಿನ (ಸೆ.19-24) ಹಾಗೂ ಮೂರು ಟಿ20 (ಅ.7-11) ಸರಣಿಗಳನ್ನು ಆಡಲಿದ್ದು, ಈ ಎರಡು ಸರಣಿಗಳ ನಡುವೆ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ.
ಭಾರತ ಮಹಿಳಾ ತಂಡ 2006ರಲ್ಲಿ ಕಡೇ ಬಾರಿಗೆ ಆಸ್ಟ್ರೆಲಿಯಾ ಎದುರು ಟೆಸ್ಟ್ ಪಂದ್ಯವನ್ನಾಡಿತ್ತು. ಮಹಿಳಾ ಟೆಸ್ಟ್ ಇತಿಹಾಸದಲ್ಲಿ ಎರಡನೇ ಅಹರ್ನಿಶಿ ಟೆಸ್ಟ್ ಪಂದ್ಯ ಇದಾಗಲಿದೆ. 2017ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೆಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ಅಹರ್ನಿಶಿ ಪಂದ್ಯವನ್ನಾಡಿದ್ದವು. ದೇಶೀಯ ಕ್ರಿಕೆಟ್ನಲ್ಲಿ ಹೆಚ್ಚು ರೆಡ್ ಬಾಲ್ನಲ್ಲಿ ಆಡದ ಭಾರತ ಮಹಿಳಾ ತಂಡಕ್ಕೆ ಮುಂಬರುವ ಇಂಗ್ಲೆಂಡ್ ಹಾಗೂ ಆಸ್ಟ್ರೆಲಿಯ ವಿರುದ್ಧದ ಟೆಸ್ಟ್ ಪಂದ್ಯಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ಮಹಿಳಾ ಆಶಸ್ನಲ್ಲಿ ಎದುರಾಗುವ ಆಸೀಸ್ ಹಾಗೂ ಇಂಗ್ಲೆಂಡ್ ತಂಡಗಳು ಮಾತ್ರ ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳನ್ನಾಡುತ್ತಾ ಬಂದಿವೆ.