ಕ್ರೀಡೆ

ಮ್ಯಾಚ್​ ಗೆಲ್ಲುವುದು ಬಿಟ್ಟು ಇನ್ನೆಲ್ಲಾ ಮಾಡ್ತೀಯಾ! ಆಜಂ ಖಾನ್​ವಿರುದ್ಧ ಪಾಕ್ ಕ್ರಿಕೆಟ್ ಫ್ಯಾನ್ಸ್​ ಗರಂ

ನ್ಯೂಯಾರ್ಕ್​: ಜೂನ್​ 09 ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಅದರಲ್ಲೂ ಭಾರತ ಕೊಟ್ಟ 119 ರನ್​ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.

ಟೀಂ ಇಂಡಿಯಾದ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಅಮೆರಿಕಾದ ರಸ್ತೆಬದಿಯಿರುವ ಜಂಟಿ ಪುಡ್​ ಸ್ಟಾಲ್​ನಲ್ಲಿ ಕಾಣಿಸಿಕೊಂಡ ಪಾಕಿಸ್ತಾನ ತಂಡದ ಯುವ ಬ್ಯಾಟರ್​-ವಿಕೆಟ್ ಕೀಪರ್​ ಆದ ಆಜಂ ಖಾನ್​, ತನ್ನಿಷ್ಟದ ಆಹಾರವನ್ನು ವೇಗವಾಗಿ ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕ್ರಿಕೆಟಿಗನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

2021ರಲ್ಲಿ ಪಾಕಿಸ್ತಾನ ತಂಡಕ್ಕೆ ಪಾದಾರ್ಪಣೆ ಮಾಡಿದ ಆಜಂ ಖಾನ್​, ಕಳೆದ ಇಂಗ್ಲೆಂಡ್​ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಕಂಗಣ್ಣಿಗೆ ಗುರಿಯಾಗಿದ್ದರು. 14 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ ಪಂದ್ಯಾವಳಿಗಳಲ್ಲಿ ಆಡಿರುವ ಆಜಂ ಖಾನ್​, ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಇದು ಅಪಾರ ಸಂಖ್ಯೆಯ ಪಾಕ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಇನ್ನು ಕ್ರೀಡಾಪಟುಗಳು ಅಂದಮೇಲೆ ಫಿಟ್ನೆಸ್​ ಬಹುಮುಖ್ಯವಾದದ್ದು. ಹೀಗಿರುವಾಗ ದಡೂತಿ ದೇಹ ಹೊತ್ತು, ಮೈದಾನಕ್ಕೆ ಬರುವುದು ಎಷ್ಟು ಸರಿ ಎಂದು ಕಿಡಿಕಾರಿದ್ದರು.

ಸದ್ಯ ಇದೆಲ್ಲದರ ಮಧ್ಯೆ ರಸ್ತೆಬದಿ ತಿನ್ನುತ್ತಿರುವ ಆಜಂ ಖಾನ್​ರ ವಿಡಿಯೋ ಮಾತ್ರ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಫಿಟ್ನೆಸ್​ ಮತ್ತು ಆಟದ ಬಗ್ಗೆ ಹೆಚ್ಚು ಗಮನಹರಿಸುವುದನ್ನು ಬಿಟ್ಟು, ಉಳಿದೆಲ್ಲಾ ಮಾಡುತ್ತೀಯಾ ಎಂದು ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).