ಕೊಲಂಬೊ: 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಶ್ರೀಲಂಕಾ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಂಕಾದ ದಿಗ್ಗಜ ಆಟಗಾರರಾದ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ ಹಾಗೂ ಉಪುಲ್ ತರಂಗ ಅವರುಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಭಾರತ ಹಾಗೂ ಶ್ರೀಲಂಕಾ ನಡುವಿನ ಫೈನಲ್ ಪಂದ್ಯ ಮಾರಾಟವಾಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುಥಾಗಮಗೆ ಆರೋಪ ಮಾಡಿದ್ದರು. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಶೇಷ ತನಿಖಾ ದಳ ತನಿಖೆ ಕೈಗೆತ್ತಿಗೊಂಡಿತ್ತು.
ಕ್ರೀಡಾ ಸಚಿವಾಲಯದ ಕಾರ್ಯದಶಿರ್ಗೆ ವರದಿ ಸಲ್ಲಿಸುತ್ತಿದ್ದು ಆಂತರಿಕ ಚರ್ಚೆಯಂತೆ ತನಿಖೆಯನ್ನು ಇಲ್ಲಿಯೇ ಮುಕ್ತಾಯಗೊಳಿಸಲಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಗತ್ ಫೋನ್ಸೆಕಾ ಹೇಳಿದ್ದಾರೆ. ಮಹಿಂದಾನಂದ ಅಲುಥಾಗಮಗೆ ಮಡಿದ್ದ 14 ಆರೋಪಗಳಲ್ಲಿ ಯಾವುದೂ ಸಾಬೀತಾಗಲಿಲ್ಲ. ನಮಗೆ ಯಾವುದೇ ಮಾಹಿತಿ ಲಭಿಸಲಿಲ್ಲ. ಆಟಗಾರರನ್ನು ಏಕೆ ತನಿಖೆ ನಡೆಸಬೇಕು ಎಂದು ಫೋನ್ಸೆಕಾ ತಿಳಿಸಿದ್ದಾರೆ. ಅಂದು ಲಂಕಾ ತಂಡ ಪ್ರತಿನಿಧಿಸಿದ್ದ ಕುಮಾರ ಸಂಗಕ್ಕರ, ಜಯವರ್ಧನೆ ಹಾಗೂ ಉಪುಲ್ ತರಂಗ ಜತೆಗೆ ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಅರವಿಂದ ಡಿ ಸಿಲ್ವಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಹಾಲಿ ಎಂಸಿಸಿ ಅಧ್ಯಕ್ಷ ಸಂಗಕ್ಕರ ಅವರನ್ನು 10 ಗಂಟೆಗಳ ಕಾಲ, ಡಿ ಸಿಲ್ವಾ ಅವರನ್ನು 6 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು. ಅಂದಿನ ತಂಡದ ಆಯ್ಕೆ ಕುರಿತು ಮಹಿಂದಾನಂದ ಅಲುಥಾಗಮಗೆ ಸಂಶಯ ವ್ಯಕ್ತ ಪಡಿಸಿದ್ದರು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 6 ವಿಕೆಟ್ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು.