ಕ್ರೀಡೆ

ಪಾಕಿಸ್ತಾನದ ಸಹಸ್ಪರ್ಧಿ ಅರ್ಷದ್​ ನದೀಮ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಚಿನ್ನದ ಹುಡುಗ ನೀರಜ್​ ಚೋಪ್ರಾ! Neeraj Chopra

Neeraj Chopra : ಭಾರತದ ಕ್ರೀಡಾ ಕ್ಷೇತ್ರದ ಬಂಗಾರದ ಮನುಷ್ಯ ಎನಿಸಿಕೊಂಡಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಪಾಕಿಸ್ತಾನದ ಜಾವೆಲಿನ್​ ಎಸೆತಗಾರ ಹಾಗೂ ಪ್ಯಾರೀಸ್ ಒಲಿಂಪಿಕ್ಸ್​ನ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು, ನದೀಮ್​ ಅವರು ಎಂದಿಗೂ ನನ್ನ ಆಪ್ತ ಸ್ನೇಹಿತರಾಗಿರಲಿಲ್ಲ ಎಂದಿದ್ದಾರೆ.

ಕ್ರೀಡಾಪಟುಗಳಾಗಿ ನಮ್ಮಿಬ್ಬರು ನಡುವೆ ವೃತ್ತಿಪರ ಸಂಬಂಧವಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿರುವುದರಿಂದ ನದೀಮ್​ ಅವರೊಂದಿಗಿನ ಸಂಬಂಧವು ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆಯಿಲ್ಲ ಎಂದು ನೀರಜ್ ಹೇಳಿದ್ದಾರೆ.

2018ರ ಏಷ್ಯನ್ ಕ್ರೀಡಾಕೂಟದಲ್ಲಿ ಇಬ್ಬರೂ ಮೊದಲ ಬಾರಿಗೆ ಪರಸ್ಪರ ಪೈಪೋಟಿ ನಡೆಸಿದರು. ನಂತರ, ಇಬ್ಬರೂ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ 92.97 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದರೆ, ನೀರಜ್, 89.45 ಮೀ ದೂರ ಎಸೆದು ಬೆಳ್ಳಿ ಗೆದ್ದರು.

ಪ್ಯಾರಿಸ್​ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ನೀರಜ್ ಚೋಪ್ರಾ ಅವರ ತಾಯಿ, ಅರ್ಷದ್ ನದೀಮ್​ರನ್ನು ಅಭಿನಂದಿಸಿದ್ದು ಈ ವೇಳೆ ದೊಡ್ಡ ಸುದ್ದಿಯಾಗಿತ್ತು. ನೀರಜ್​ ಕೂಡ ನದೀಮ್​ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು. ಆದರೆ, ಪಹಲ್ಗಾಮ್​ ಭಯೋತ್ಪಾದಕ ದಾಳಿಯ ಬಳಿಕ ನಮ್ಮಿಬ್ಬರ ನಡುವೆ ಇನ್ನು ಮುಂದೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ನೀರಜ್​ ಹೇಳಿದ್ದಾರೆ.

ಇನ್ನು ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಗೆ ಅರ್ಷದ್ ಅವರನ್ನು ಆಹ್ವಾನಿಸಿದ ನಂತರ ನೀರಜ್ ಮತ್ತು ಅವರ ಕುಟುಂಬದ ಮೇಲೆ ತೀವ್ರ ಸೈಬರ್ ದಾಳಿ ನಡೆಯಿತು. ಇದಕ್ಕೆ ನೀರಜ್ ಕಟುವಾದ ಭಾಷೆಯಲ್ಲಿ ಪ್ರತಿಕ್ರಿಯಿಸಿದರು. ಇದೀಗ ನದೀಮ್​ ಜತೆಗಿನ ಸಂಬಂಧದ ಬಗ್ಗೆ ಮಾತನಾಡುವ ಮೂಲಕ ನೀರಜ್​ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)