ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಶುಕ್ರವಾರ ತಮ್ಮ 42ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ರಾಂಚಿಯ ಮನೆಯ ಅಂಗಳದಲ್ಲಿ ನೆಚ್ಚಿನ ನಾಯಿಗಳ ಎದುರು ಕೇಕ್ ಕತ್ತರಿಸಿದ ಧೋನಿ, ಬಳಿಕ ಅದರ ಪೀಸ್ಗಳನ್ನು ನಾಯಿಗಳಿಗೆ ತಿನ್ನಿಸಿದರು. ಇದರ ವಿಡಿಯೋವನ್ನು ಧೋನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಧೋನಿ, ಶನಿವಾರ ಮೂಲಕ ಅಪರೂಪಕ್ಕೆಂಬಂತೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದರು. ವಿಶಿಷ್ಟವಾಗಿ ಬರ್ತ್ಡೇ ಆಚರಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಧೋನಿ, ಜನ್ಮದಿನದಂದು ಶುಭಾಶಯ ತಿಳಿಸಿದ ಅಭಿಮಾನಿಗಳು ಮತ್ತು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಧೋನಿ ಪೋಸ್ಟ್ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತಕ್ಕೆ 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕರಾಗಿರುವ ಧೋನಿ, 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಸದ್ಯ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ವರ್ಷವೇ ಅವರು ಐಪಿಎಲ್ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಇನ್ನೊಂದು ವರ್ಷ ಐಪಿಎಲ್ ಆಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಬಯಸಿರುವುದಾಗಿ ಧೋನಿ, ಕಳೆದ ಆವೃತ್ತಿಯ ಪ್ರಶಸ್ತಿ ಗೆಲುವಿನ ಬಳಿಕ ಹೇಳಿದ್ದರು.