ನವದೆಹಲಿ: ಮೇಘಾಲಯ ತಂಡದ ರಣಜಿ ಆಟಗಾರ ಆಕಾಶ್ ಕುಮಾರ್ ಚೌಧರಿ (Akash kumar chowdry) ಅವರು ಅರುಣಾಚಲ ಪ್ರದೇಶ ವಿರುದ್ಧ ಭಾನುವಾರ ( ನ.09) ನಡೆದ ರಣಜಿ ಟ್ರೋಫಿ (Ranaji Trophy) ಪಂದ್ಯದಲ್ಲಿ ಸತತ ಎಂಟು ಸಿಕ್ಸರ್‌ಗಳನ್ನು ಸಿಡಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಎಂಟು ಸಿಕ್ಸರ್ ಹಾಗೂ 11 ಎಸೆತಗಳಲ್ಲಿ ವೇಗದ ಅರ್ಧ ಶತಕ ಗಳಿಸಿದ ಚೊಚ್ಚಲ ಆಟಗಾರನೆಂಬ ಕೀರ್ತಿಗೆ ಭಾಜನಾಗಿದ್ದಾರೆ.
25 ವರ್ಷ ವಯಸ್ಸಿನ ಆಕಾಶ್ ಅವರನ್ನು ವೇಗದ ಬೌಲರ್ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಬ್ಯಾಟಿಂಗ್ನಲ್ಲಿ ಇಂಥದ್ದೊಂದು ಅದ್ಭುತ ಪ್ರದರ್ಶನ ನೀಡಿರುವುದರಿಂದ ಆಕಾಶ್ ಅವರು ಇದೀಗ ಹೆಚ್ಚು ಚರ್ಚೆಯಲ್ಲಿದ್ದಾರೆ. ಅಲ್ಲದೆ, ಆಕಾಶ್ ಅವರ ದಾಖಲೆಗಳು ಕೂಡ ತುಂಬಾ ವಿಶೇಷವಾಗಿದೆ.
ಸೂರತ್‌ನಲ್ಲಿ ನಡೆಯುತ್ತಿರುವ ಭಾರತದ ದೇಶೀಯ ಪಂದ್ಯಾವಳಿಯ ಎರಡನೇ ದಿನದಂದು, ಒಂದು ಡಾಟ್ ಬಾಲ್ ಹಾಗೂ ಎರಡು ಸಿಂಗಲ್ಸ್ ನಂತರ ಕ್ರೀಸ್‌ನಲ್ಲಿ ನೆಲೆನಿಂತ ಮೇಘಾಲಯದ ರಣಜಿ ಆಟಗಾರ ಆಕಾಶ್, ಅರುಣಾಚಲ ಪ್ರದೇಶದ ಎಡಗೈ ಸ್ಪಿನ್ನರ್ ಲಿಮರ್ ದಾಬಿಗೆ ಬರೋಬ್ಬರಿ 6 ಎಸೆತದಲಿ 6 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನೆ ಮಾತಾಗಿದ್ದಾರೆ.
ಆಕಾಶ್ ಅವರು ಮೊದಲ ದರ್ಜೆಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಆಟಗಾರರಾಗಿದ್ದಾರೆ. ಇದರಿಂದಾಗಿ ಅವರು ಗ್ಯಾರಿ ಸೋಬರ್ಸ್ (Garry sobers) ಮತ್ತು ರವಿಶಾಸ್ತ್ರಿಯಂತಹ (Ravi Shasthri) ಗಣ್ಯರ ಸಾಲಿನಲ್ಲಿ ಸೇರಿದ್ದಾರೆ. ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ಆಕಾಶ್, ನಂತರ ಎದುರಿಸಿದ ಮುಂದಿನ ಎರಡು ಎಸೆತಗಳಲ್ಲಿ ಮತ್ತೆ ಎರಡು ಸಿಕ್ಸರ್ ಸಿಡಿಸುವ ಮೂಲಕ ಕೇವಲ 11 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಮೂಲಕ ಹಿಂದಿನ ದಾಖಲೆಯನ್ನು ಮುರಿದರು.
ಲೀಸೆಸ್ಟರ್‌ಶೈರ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ವೇಯ್ನ್ ವೈಟ್ (Wayne White) 2012 ರಲ್ಲಿ ಎಸೆಕ್ಸ್ ತಂಡದ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕದ ಮೈಲಿಗಲ್ಲನ್ನು ತಲುಪಿದ್ದರು. ಇದೀಗ ಆ ದಾಖಲೆಯನ್ನು ಆಕಾಶ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. (ಏಜೆನ್ಸೀಸ್)