ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಮೂವರು ಅಧಿಕಾರಿಗಳ ತಲೆದಂಡ, ತನಿಖೆಗೆ ಸಮಿತಿ ರಚನೆ! parappana agrahara jail

parappana agrahara jail
Published on

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ( parappana agrahara jail ) ಕೈದಿಗಳ ಪಾಲಿನ ನರಕವಲ್ಲ, ಸ್ವರ್ಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಕಾರಣ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದಕ್ಕೆ ಸಂಬಂಧಿಸಿದ ಒಂದಿಷ್ಟು ವಿಡಿಯೋಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಸರ್ಕಾರ ಇಬ್ಬರು ಜೈಲಾಧಿಕಾರಿಗಳನ್ನು ಸಸ್ಪೆಂಡ್​ ಮಾಡಿದೆ.

ರಾಜಾತಿಥ್ಯ ಪ್ರಕರಣ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿ ಕರೆದಿದ್ದ ಗೃಹ ಸಚಿವ ಡಾ. ಪರಮೇಶ್ವರ್, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಸುದ್ದಿಗೋಷ್ಠಿಗೂ ಮುನ್ನವೇ ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಅಧಿಕಾರಿಗಳ ಜತೆ ಹೋಮ್​ ಮಿನಿಸ್ಟರ್​ ಸಭೆ ನಡೆಸಿದರು. ಸಭೆಯಲ್ಲಿ ತೆಗೆದುಕೊಂಡು ನಿರ್ಧಾರದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್​ ಅವರು ತಿಳಿಸಿದರು.

ಜೈಲಿನ ಮುಖ್ಯ ಅಧೀಕ್ಷಕ ಸುರೇಶ್​, ಜೈಲು ಅಧೀಕ್ಷಕ ಮ್ಯಾಗೇರಿ ಮತ್ತು ಸಹಾಯಕ ಅಧೀಕ್ಷಕ ಅಶೋಕ್​ ಬಜಂತ್ರಿ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಪರಮೇಶ್ವರ್​ ಅವರು ಹೇಳಿದರು. ಜೈಲಿನಲ್ಲಿ ರಾಜಾತಿಥ್ಯ ಕುರಿತು ಒಂದಿಷ್ಟು ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ನಮ್ಮ ಗಮನಕ್ಕೆ ಬಂದ ಕೂಡಲೇ ವಿಡಿಯೋಗಳನ್ನು ಪರಿಶೀಲನೆ ನಡೆಸಿದ್ದೇವೆ. ಅದರಲ್ಲಿ ಎಲ್ಲ ವಿಡಿಯೋಗಳು ಪ್ರಸ್ತುತವಲ್ಲ ಎಂದು ಪರಮೇಶ್ವರ್​ ಹೇಳಿದರು.

ಬೆಳಕಿಗೆ ಬಂದಿರುವ ವಿಡಿಯೋಗಳಲ್ಲಿ ಕೆಲವು 2023ಕ್ಕೆ ಸೇರಿದ್ದಾಗಿವೆ. ಉಳಿದ ಎರಡ್ಮೂರು ವಿಡಿಯೋಗಳು ಮಾತ್ರ ಇತ್ತೀಚಗೆ ಸಂಬಂಧಿಸಿವೆ. ವಿಡಿಯೋ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ತನಿಖೆಗಾಗಿ ಒಂದು ಸಮಿತಿಯನ್ನು ರಚನೆ ಮಾಡಿದ್ದೇವೆ. ಇನ್ನು ಮುಂದೆ ಜೈಲಿನ ಮೇಲ್ವಿಚಾರಣೆಗಾಗಿ ಓರ್ವ ಐಪಿಎಸ್​ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ಪರಮೇಶ್ವರ್​ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇನ್ನು ಜೈಲುಗಳ ಮೇಲೆ ತೀವ್ರ ನಿಗಾ ವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ ಎಂದು ಪರಮೇಶ್ವರ್​ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net