ಕ್ರೀಡೆ

ಶೂಟರ್ ಅಭಿಷೇಕ್ ವರ್ಮಗೆ ಕ್ರಿಮಿನಲ್ ಲಾಯರ್ ಆಗುವ ಹಂಬಲ!

ನವದೆಹಲಿ: ಹಲವಾರು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಪದಕ ಜಯಿಸಿರುವ ಭಾರತದ ಶೂಟರ್ ಅಭಿಷೇಕ್ ವರ್ಮ ಅವರೀಗ ಶೂಟಿಂಗ್ ಜತೆಜತೆಯಲ್ಲೇ ಲಾಯರ್ ಆಗಿ ಮುಂದುವರಿಯುವತ್ತ ಗಮನಹರಿಸಿದ್ದಾರೆ. ಕಾನೂನು ಪದವಿಯ ಜತೆಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿರುವ ಅಭಿಷೇಕ್ ವರ್ಮ, ಸೈಬರ್ ಕ್ರೈಮ್ ಸಂಬಂಧಿಸಿದ ಕೇಸ್‌ಗಳತ್ತ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಕ್ರಿಮಿನಲ್ ಲಾಯರ್ ಆಗಬೇಕೆಂಬ ಕನಸು ಹೊಂದಿದ್ದಾರೆ.

ಶೂಟಿಂಗ್ ವಿಶ್ವಕಪ್‌ನಲ್ಲಿ 2 ಸ್ವರ್ಣ ಪದಕ ಜಯಿಸಿರುವ 30 ವರ್ಷದ ಪಿಸ್ತೂಲ್ ಶೂಟರ್ ಅಭಿಷೇಕ್ ವರ್ಮ, ಈ ವರ್ಷ ಟೋಕಿಯೊ ಒಲಿಂಪಿಕ್ಸ್ ಮುಗಿದ ಬಳಿಕ ವಕೀಲ ವೃತ್ತಿಯತ್ತ ಮತ್ತೆ ಗಮನಹರಿಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಕರೊನಾ ಹಾವಳಿಯಿಂದಾಗಿ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಒಲಿಂಪಿಕ್ಸ್‌ಗೆ ಮುನ್ನ ಈ ವರ್ಷದಿಂದಲೇ ವಕೀಲ ವೃತ್ತಿ ಆರಂಭಿಸಲು ಅವರು ಸಿದ್ಧರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸದಿಂದಾಗಿ ಸೈಬರ್ ಕ್ರೈಮ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ವಾದ ಮಂಡಿಸುವುದು ತಮಗೆ ಸುಲಭವಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯದ ನ್ಯಾಯಾಧೀಶರ ಪುತ್ರರಾಗಿರುವ ಅಭಿಷೇಕ್ ವರ್ಮ, ಕಳೆದ 6 ವರ್ಷಗಳಿಂದ ಪಿಸ್ತೂಲ್ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರು. ತಂದೆಯ ಅಂಗರಕ್ಷಕರು ಪಿಸ್ತೂಲ್ ಹಿಡಿದುಕೊಂಡಿರುವುದನ್ನು ನೋಡಿ ಅವರು ಶೂಟಿಂಗ್‌ನತ್ತ ಆಕರ್ಷಿತರಾಗಿದ್ದರಂತೆ. 2019ರಲ್ಲಿ ಬೀಜಿಂಗ್‌ನಲ್ಲಿ ವಿಶ್ವಕಪ್‌ನಲ್ಲಿ ಅವರು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಬಳಿಕ ರಿಯೋ ಡಿ ಜನೈರೋದ ವಿಶ್ವಕಪ್‌ನಲ್ಲೂ ಚಿನ್ನ ಗೆದ್ದಿದ್ದರು. 2018ರ ಜಕಾರ್ತ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಟೋಕಿಯೋ ಒಲಿಂಪಿಕ್ಸ್‌ಗೂ ಅವರು ಈಗಾಗಲೆ ಅರ್ಹತೆ ಪಡೆದುಕೊಂಡಿದ್ದಾರೆ.