ನವದೆಹಲಿ: ಐಪಿಎಲ್ ಸೀಸನ್ 17 ಇತ್ತೀಚೆಗಷ್ಟೇ ಕೆಕೆಆರ್ ಗೆಲುವಿನ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. 8 ವಿಕೆಟ್ಗಳ ಅಂತರದಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕೊಲ್ಕತ್ತ ನೈಟ್ ರೈಡರ್ಸ್ ಪಡೆ, ಮೂರನೇ ಬಾರಿಗೆ ಚೆನ್ನೈನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇನ್ನು ಪಂದ್ಯದಲ್ಲಿ ವಿನ್ನರ್, ರನ್ನರ್, ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಗಳಿಸಿದ ತಂಡಗಳಿಗೆ ಬಿಸಿಸಿಐ ಬಹುಮಾನ ಹಣವನ್ನು ಹಂಚಿತು. ಇದೀಗ ಸತತ ಎರಡು ತಿಂಗಳು ಮೈದಾನದಲ್ಲಿ ಕೆಲಸ ಮಾಡಿದ ಪಿಚ್ ಕ್ಯೂರೇಟರ್ ಮತ್ತು ಗ್ರೌಂಡ್ನಲ್ಲಿದ್ದ ಕಾರ್ಮಿಕರಿಗೂ ಸಹ ವಿಶೇಷ ಬಹುಮಾನವನ್ನು ಘೋಷಿಸಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಅಧೀಕ್ಷಕರ ಆತ್ಮಹತ್ಯೆ : ನಿಗಮ ಹಗರಣ ; ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ವಿಜಯೇಂದ್ರ ಆಗ್ರಹ
ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಸಮಯದಲ್ಲಿ ದಣಿವರಿಯದೆ ಶ್ರಮವಹಿಸಿದವರಿಗೆ ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಾ ಬಹುಮಾನದ ಹಣವನ್ನು ಘೋಷಿಸಿದ್ದಾರೆ. 10 ಸ್ಟೇಡಿಯಂನಲ್ಲಿ ಕೆಲಸ ಮಾಡಿದ ಅಷ್ಟು ಕಾರ್ಮಿಕರಿಗೂ ತಲಾ 25 ಲಕ್ಷ ರೂ. ನೀಡಲಾಗುವುದು. ಪ್ರತೇಕವಾಗಿ ಗುವಾಹಟ್ಟಿ, ಧರ್ಮಶಾಲಾ ಮತ್ತು ವೈಜಾಗ್ ಸ್ಟೇಡಿಯಂನ ಕ್ಯೂರೇಟರ್ ಮತ್ತು ಮೈದಾನದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ತಲಾ 10 ಲಕ್ಷ ರೂ. ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ಬರೆದ ಜಯ್ ಷಾ, “ಈ ಬಾರಿಯ ಯಶಸ್ವಿ ಟಿ20 ಲೀಗ್ನ ನಿಜವಾದ ಹೀರೋಗಳು ಇವರು. ಕಠಿಣವಾದ ಹವಾಮಾನ ಪರಿಸ್ಥಿತಿಗಳಲ್ಲಿಯೂ ಸಹ ನಮ್ಮ ಗ್ರೌಂಡ್ ಸಿಬ್ಬಂದಿ ಅದ್ಭುತವಾದ ಪಿಚ್‌ಗಳನ್ನು ಒದಗಿಸಲು ದಣಿವರಿಯದೆ ಕೆಲಸ ಮಾಡಿದ್ದಾರೆ. ಶ್ಲಾಘನೆಯ ಸಂಕೇತವಾಗಿ, 10 ಐಪಿಎಲ್ ಸ್ಟೇಡಿಯಂಗಳಲ್ಲಿ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂ.ಗಳನ್ನು ನೀಡಲಾಗಿದ್ದು, ಉಳಿದ ಮೂರು ಸ್ಥಳಗಳ ಸ್ಟೇಡಿಯಂಗೆ ತಲಾ 10 ಲಕ್ಷ ರೂ.ಗಳನ್ನು ನೀಡಿದ್ದೇವೆ. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).