

ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು : ಇಲ್ಲದಿದ್ದರೆ ರಾಜ್ಯದೆಲ್ಲಡೆ ಬಿಜೆಪಿ ಹೋರಾಟ
ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಶಿವಮೊಗ್ಗ ಕಚೇರಿಯ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆಯ ಸಚಿವರಾದ ನಾಗೇಂದ್ರ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಒತ್ತಾಯಿಸಿದ್ದಾರೆ
ಕಲಬುರಗಿಯಲ್ಲಿ ಇಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿ ಇಲಾಖೆಯ ಅಧಧೀಕ್ಷಕರಾದ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟಿನಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದ್ದು ಹಿರಿಯ ಅಧಿಕಾರಿಗಳು ಸಚಿವರ ಮೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಮಾಡಿ ಅವ್ಯವಹಾರ ನಡೆದಿದೆ ಎಂದು ಉಲ್ಲೇಖಿಸಿರುವುದರಿಂದ ಹಾಲಿ ಹೈಕೋರ್ಟ್ ಜಡ್ಜ್ ಮುಖಾಂತರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಈ ಸಚಿವರನ್ನು ಮುಂದುವರಿಸಲು ಬಿಡುವುದಿಲ್ಲ ಮತ್ತು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನಸಾಮಾನ್ಯರ ಬದುಕು ಕಷ್ಟವಾಗಿದೆ. ಇದರ ವಿರುದ್ಧ ಪಕ್ಷವು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಮತ್ತು ರಾಜ್ಯಾದ್ಯಂತ ಹೋರಾಟ ಮಾಡಲು ಸಜ್ಜಾಗಿದೆ ಎಂದು ಹೇಳಿದರು. ಪರಿಶಿಷ್ಟ ಪಂಗಡಕ್ಕೆ ಸೇರಿದ 187 ಕೋಟಿ ರೂಪಾಯಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇದರ ವಿರುದ್ಧ ಕೂಡ ಹೋರಾಟ ನಡೆಸಲಾಗುವುದು ಎಂದರು
ಬಿ.ವೈ ವಿಜಯೇಂದ್ರ ರವರು ಬಿ.ಎಸ್ ಯಡಿಯೂರಪ್ಪ ಇನ್ನೂ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂಬುದಾಗಿ ರಾಜ್ಯ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ರಾಜ್ಯ ಶಿಕ್ಷಣ ಸಚಿವರ ಬಗ್ಗೆ ಬಂದ ದೂರುಗಳನ್ನು ಉಲ್ಲೇಖಿಸಿ ಶಿಕ್ಷಣ ಸಚಿವರು ರಾಜ್ಯಕ್ಕೆ ಮಾದರಿಯಾಗಬೇಕು ಮತ್ತು ಕನ್ನಡ ಬರುವುದಿಲ್ಲ ಎಂದು ಹೇಳಿ ಅವಾಂತರ ಸೃಷ್ಟಿಸಿರುವುದಕ್ಕೆ ತಲೆ ಕೂದಲು ಕತ್ತರಿಸಲು ಬಿಜೆಪಿ ಯುವ ಮೋರ್ಛಾ ವೆಚ್ಚ ಭರಿಸುವುದಾಗಿ ಹೇಳಿಕೆ ನೀಡಿದ್ದೇನೆ. ಶಿಕ್ಷಣ ಸಚಿವರು ಶಿಸ್ತಿನಿಂದ ಇರುವಂತೆ ಈ ಸಲಹೆ ನೀಡಿದ್ದೇನೆ ಎಂದು ಸ್ಪಷ್ಟಪಡಿ ಸಿದರು. ಬೆಂಗಳೂರು ನಗರದಲ್ಲಿ ಶಿಕ್ಷಕರನ್ನು ನೇಮಿಸಲು ಖಾಸಗಿ ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಿ ಕೊಟ್ಟಿರುವುದನ್ನು ಟೀಕಿಸಿದ ಅವರು ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆಯಾದ ಪರಿಣಾಮವಾಗಿ ಶೇಕಡ 20ರಷ್ಟು ಗ್ರೇಸ್ ಮಾರ್ಕ್ ನೀಡಲಾಗಿದೆ. ಶಿಕ್ಷಣ ಕ್ಷೇತ್ರದ ಹಲವಾರು ಸಮಸ್ಯೆಗಳಿಂದ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಗೊಂದಲ ಉಂಟಾಗಿದೆ ಎಂದು ದೂರಿದರು.
ಪೆನ್ ಡ್ರೈವ್ ಹಗರಣದಲ್ಲಿ ಪ್ರಜ್ವಲ್ ರೇವಣ್ಣ 31ರಂದು ಹಾಜರಾಗುವುದಾಗಿ ನೀಡಿದ ವಿಡಿಯೋ ಸಂದೇಶ ಗಮನಕ್ಕೆ ಬಂದಿದ್ದು ಓರ್ವ ಜನಪ್ರತಿನಿಧಿಯಾಗಿ ಅವರು ತನಿಖೆ ಎದುರಿಸಬೇಕು ಎಂದರು.
ವಿಧಾನ ಪರಿಷತ್ತಿನ ಬಿಜೆಪಿಯ ಮೂರು ಸ್ಥಾನಗಳಲ್ಲಿ ಉತ್ತರ ಕರ್ನಾಟಕಕ್ಕೂ ಒಂದು ಸ್ಥಾನ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.