ಕ್ರೀಡೆ

ಮೊದಲ ಪಂದ್ಯದಲ್ಲೇ ಗ್ಲೇನ್​ ಮ್ಯಾಕ್ಸ್​ವೆಲ್​ ಸಿಕ್ಸರ್​: ಕಾಲೆಳೆದ ಆರ್​ಸಿಬಿಗೆ ಪಂಜಾಬ್ ಪಂಚ್ ಹೀಗಿದೆ!​ ​

ನವದೆಹಲಿ: ಶುಕ್ರವಾರ (ಏಪ್ರಿಲ್​ 09) ನಡೆದ ಐಪಿಎಲ್​ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ಸೆಣಸಾಟದ ನಡುವೆಯೇ ಆರ್​ಸಿಬಿ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್ ಟ್ವಿಟರ್​ನಲ್ಲಿ​ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದಾರೆ.

ನಿನ್ನೆ ಮುಂಬೈ ನೀಡಿದ ಗುರಿ ಬೆನ್ನತ್ತುವ ವೇಳೆ ಗ್ಲೇನ್​ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ತಮ್ಮ ಮೊದಲ ಸಿಕ್ಸರ್ ಸಿಡಿಸಿದರು. ಇದಾದ ಬೆನ್ನಲ್ಲೇ ಟ್ವೀಟ್​ ಮೂಲಕ ಪಂಜಾಬ್​ ಕಿಂಗ್ಸ್​ ಕಾಲೆಳೆದ ಆರ್​ಸಿಬಿ ಮ್ಯಾಕ್ಸ್​ವೆಲ್​ ಅವರನ್ನು ನಿಮ್ಮ ತಂಡದಿಂದ ಕೈಬಿಟ್ಟಿದ್ದಕ್ಕೆ ಧನ್ಯವಾದಗಳು. ಸಾಮಾಜಿಕ ಅಂತರವಿಲ್ಲದಿದ್ದರೆ ನಿಮ್ಮನ್ನು ಒಂದು ಬಾರಿ ಅಪ್ಪಿಕೊಳ್ಳುತ್ತಿದ್ದೆವು ಎಂದಿದೆ.

ಆರ್​ಸಿಬಿ ಟ್ವೀಟ್​ ಅಷ್ಟೇ ನಯವಾಗಿ ತಿರುಗೇಟು ನೀಡಿರುವ ಪಂಜಾಬ್​, ಕ್ರಿಸ್​ ಗೇಲ್​, ಕೆ.ಎಲ್​. ರಾಹುಲ್​, ಮಯಾಂಕ್​ ಅಗರ್​ವಾಲ್​ ಮತ್ತು ಸರ್ಫರಾಜ್​ ಖಾನ್​ ಅವರನ್ನು ಬಿಟ್ಟುಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು ಎಂದಿದೆ.

ಇಷ್ಟಕ್ಕೆ ಸುಮ್ಮನಾಗದ ಆರ್​ಸಿಬಿ ಪಂಜಾಬ್​ ಜರ್ಸಿ, ಹೆಲ್ಮೆಟ್​, ಪ್ಯಾಡ್ಸ್​ ಮತ್ತು ಲೋಗೋ ಬೆಂಗಳೂರು ತಂಡದಿಂದ ಸ್ಪೂರ್ತಿಗೊಂಡಿದೆ ಎಂದಿದೆ. ಇದಕ್ಕೆ ನಯವಾಗಿಯೇ ಉತ್ತರಿಸಿರುವ ಪಂಜಾಬ್​, ಬಣ್ಣಗಳನ್ನು ಕಂಡುಹಿಡಿದಿದ್ದಕ್ಕಾಗಿ ಧನ್ಯವಾದಗಳು ಎಂದಿದೆ.

ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಪಂಜಾಬ್​ ಪರ ಆಡಿದ ಮ್ಯಾಕ್ಸ್​ವೆಲ್​ ತಂಡದ ಪರ ಒಂದೇ ಒಂದು ಸಿಕ್ಸರ್​ ಸಿಡಿಸಿರಲಿಲ್ಲ. ಆದರೆ, ನಿನ್ನೆ ನಡೆದ ಮೊದಲ ಪಂದ್ಯದಲ್ಲೇ ಕೇವಲ 28 ಬಾಲ್​ಗೆ 39 ರನ್​ ಕಾಣಿಕೆ ನೀಡಿದರು. ಅಲ್ಲದೆ, ಎರಡು ಸಿಕ್ಸರ್​ ಸಹ ಸಿಡಿಸಿದರು. ಅದರಲ್ಲೂ ಒಂದು ಸಿಕ್ಸರ್​ನಲ್ಲಿ ಚೆಂಡನ್ನು ಮೈದಾನದಿಂದ ಆಚೆಗೆ ಕಳುಹಿಸಿದರು. ​

ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಹರ್ಷಲ್ ಪಟೇಲ್ ದಾಳಿಗೆ ನಲುಗಿದ ಮುಂಬೈ 9 ವಿಕೆಟ್‌ಗೆ 159 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ, ಎಬಿಡಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (39ರನ್, 28 ಎಸೆತ, 3 ಬೌಂಡರಿ, 2 ಸಿಕ್ಸರ್) ಭರ್ಜರಿ ನಿರ್ವಹಣೆಯಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 160 ರನ್ ಕಲೆಹಾಕಿತು. (ಏಜೆನ್ಸೀಸ್​)