ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ರೋಚಕ ಪಂದ್ಯ ನಾಳೆ ಭಾರತ ಪಾಕಿಸ್ತಾನ ಮಧ್ಯೆ ನಡೆಯಲಿದ್ದು, ಹ್ಯಾಟ್ರಿಕ್ ವಿಜಯ ಯಾರ ಪಾಲಿಗೆ ಎಂಬ ಕುತೂಹಲ ಕೆರಳಿದೆ. ಏಕೆಂದರೆ ನಾಳಿನ ಪಂದ್ಯದಲ್ಲಿ ಯಾರು ಗೆದ್ದರೂ ಅದು ಅವರ ಪಾಲಿಗೆ ಹ್ಯಾಟ್ರಿಕ್ ವಿಜಯವಾಗಿರಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳಿನ ಭಾರತ-ಪಾಕ್ ಏಕದಿನ ವಿಶ್ವಕಪ್ ಕ್ರಿಕೆಟ್ ನಡೆಯಲಿರುವುದು ಇನ್ನೊಂದು ವಿಶೇಷವಾಗಿದ್ದು, ಈಗಾಗಲೇ ಕ್ರಿಕೆಟ್ ಪ್ರಿಯರ ಕುತೂಹಲ ತೀವ್ರಗೊಂಡಿದೆ.
ಈ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು ಎರಡರಲ್ಲೂ ಗೆದ್ದಿದೆ, ಪಾಕಿಸ್ತಾನ ಕೂಡ ಎರಡು ಪಂದ್ಯಗಳನ್ನಾಡಿದ್ದು, ಎರಡೂ ಮ್ಯಾಚ್ಗಳಲ್ಲಿ ಗೆದ್ದಿದೆ. ಹೀಗಾಗಿ ಎರಡೂ ತಂಡಗಳೂ ಈಗಾಗಲೇ ಎರಡು ವಿಜಯದ ಉತ್ಸಾಹದಿಂದ ನಾಳಿನ ಪಂದ್ಯವನ್ನು ಎದುರಿಸುತ್ತಿದ್ದು, ನಾಳೆ ಯಾರು ಗೆದ್ದರೂ ಅದು ಅವರ ಹ್ಯಾಟ್ರಿಕ್ ಗೆಲುವಾಗಿರಲಿದೆ.
ಏಕದಿನ ಪಂದ್ಯಗಳಲ್ಲಿ ಭಾರತ-ಪಾಕ್ ಇದುವರೆಗೆ 134 ಪಂದ್ಯಗಳನ್ನು ಆಡಿದ್ದು, ಆ ಪೈಕಿ 56ರಲ್ಲಿ ಭಾರತ, 73ರಲ್ಲಿ ಪಾಕ್ ಗೆದ್ದಿದೆ. ಐದು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಇರಲಿಲ್ಲ.ಆದರೆ ಕಳೆದ 20 ವರ್ಷಗಳ ಅಂಕಿ-ಅಂಶಗಳ ಪ್ರಕಾರ ಭಾರತ-ಪಾಕ್ ನಡುವಿನ ಏಕದಿನ ಪಂದ್ಯಗಳಲ್ಲಿ ಭಾರತ 27 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕ್ 21ರಲ್ಲಷ್ಟೇ ಗೆಲುವು ಕಂಡಿದೆ.
ಇನ್ನು ಇದುವರೆಗೆ ಭಾರತ ಪಾಕ್ ಏಳು ವಿಶ್ವಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಏಳರಲ್ಲೂ ಪಾಕ್ ವಿರುದ್ಧ ಭಾರತವೇ ಜಯ ಗಳಿಸಿದೆ. ಹೀಗಾಗಿ ನಾಳಿನ ಭಾರತ-ಪಾಕ್ ಹಣಾಹಣಿಯಲ್ಲೇ ಹ್ಯಾಟ್ರಿಕ್ ಗೆಲುವು ಭಾರತದ್ದೇ ಎನ್ನಲಾಗುತ್ತಿದ್ದು, ಅಭಿಮಾನಿಗಳು ಆಟಕ್ಕೂ ಮೊದಲೇ ಭಾರತ ಗೆದ್ದಂತೆ ಸ್ಕೋರ್ ಪಟ್ಟಿ ತಯಾರಿಸಿ ಆತ್ಮವಿಶ್ವಾಸ ತೋರಲಾರಂಭಿಸಿದ್ದಾರೆ.