More

    ವಿಶ್ವಕಪ್​ನಲ್ಲಿ ಪಾಕಿಸ್ತಾನ ಎದುರು ಭಾರತ ಅಜೇಯ; ಹೀಗಿದ್ದವು ಹಿಂದಿನ 7 ಮುಖಾಮುಖಿಗಳು…

    ಬೆಂಗಳೂರು: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವಾಗಲೂ ಕಾವೇರಿಸುತ್ತವೆ. ಅದರಲ್ಲೂ ವಿಶ್ವಕಪ್​ ವೇದಿಕೆಯಲ್ಲಂತೂ ಅದು ಮೇರೆ ಮೀರುತ್ತದೆ. ಇದರ ನಡುವೆಯೂ ಭಾರತ ಏಕದಿನ ವಿಶ್ವಕಪ್​ನಲ್ಲಿ 1992ರಿಂದ ಪಾಕ್​ ವಿರುದ್ಧದ ಎಲ್ಲ 7 ಮುಖಾಮುಖಿಗಳಲ್ಲಿ ಗೆದ್ದ ಅಜೇಯ ದಾಖಲೆ ಹೊಂದಿದ್ದು, ಈ ಸಲ ಅದನ್ನು 8ಕ್ಕೆ ವಿಸ್ತರಿಸುವ ಗುರಿಯಲ್ಲಿದೆ. ಶನಿವಾಋ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಸಲದ ಹೈ&ವೋಲ್ಟೇಜ್​ ಪಂದ್ಯ ನಡೆಯಲಿದೆ. “ಫೈನಲ್​’ನಷ್ಟೇ ಮಹತ್ವದ ಈ ಪಂದ್ಯವನ್ನು ಸ್ಟೇಡಿಯಂನಲ್ಲಿ 1.32 ಲಕ್ಷ ಮತ್ತು ಜಗತ್ತಿನೆಲ್ಲೆಡೆ 150 ಕೋಟಿಗೂ ಅಧಿಕ ಜನರು ವೀಸುವ ನಿರೀಕ್ಷೆ ಇದೆ. ಇಲ್ಲಿ ಮಿಂಚುವ ಆಟಗಾರರು ಕ್ರಿಕೆಟ್​ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಅಜಯ್​ ಜಡೇಜಾ, ವೆಂಕಟೇಶ್​ ಪ್ರಸಾದ್​ ನಿರ್ವಹಣೆಗಳೇ ಇದಕ್ಕೆ ಸಾಕ್ಷಿ. ಇನ್ನು ದಿಗ್ಗಜ ಆಟಗಾರರಿಗೂ ತಮ್ಮ ಹಿರಿಮೆ ತೋರಿಸಲು ಇದು ಸದಾವಕಾಶ. ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಈ ಪಂದ್ಯಗಳಲ್ಲೇ ಮಿಂಚಿ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ. ಭಾರತ-ಪಾಕ್​ ನಡುವಿನ ಹಿಂದಿನ 7 ವಿಶ್ವಕಪ್​ ಪಂದ್ಯಗಳ ಹಿನ್ನೋಟ ಇಲ್ಲಿದೆ…

    1992: ಪ್ರಥಮ ಮುಖಾಮುಖಿ
    ಸಚಿನ್​ 1992ರಲ್ಲಿ ಮೊದಲ ಬಾರಿ ವಿಶ್ವಕಪ್​ ಆಡಿದ್ದರು. ಅದು ಆಸ್ಟ್ರೆಲಿಯಾ ನೆಲದಲ್ಲೇ. ಆಗ ಭಾರತ-ಪಾಕ್​ ನಡುವಿನ ವಿಶ್ವಕಪ್​ನ ಮೊದಲ ಮುಖಾಮುಖಿಗೆ ವೇದಿಕೆಯಾಗಿದ್ದು ಸಿಡ್ನಿ ಕ್ರಿಕೆಟ್​ ಮೈದಾನ. ಮಾರ್ಚ್​ 4ರಂದು ಅಜರುದ್ದೀನ್​ ನಾಯಕತ್ವದಲ್ಲಿ ಆಡಿದ್ದ ಭಾರತ ಮೊದಲು ಬ್ಯಾಟಿಂಗ್​ ಮಾಡಿ 49 ಓವರ್​ಗಳಲ್ಲಿ 7 ವಿಕೆಟ್​ಗೆ 216 ರನ್​ ಪೇರಿಸಿತ್ತು. 20 ವರ್ಷದ ಹುಡುಗನಾಗಿದ್ದ ಸಚಿನ್​ 62 ಎಸೆತಗಳಲ್ಲಿ 3 ಬೌಂಡರಿ ಇದ್ದ 54 ರನ್​ ಬಾರಿಸಿ ಅಜೇಯರಾಗುಳಿದಿದ್ದರು. ಮೊತ್ತ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಮೀರ್​ ಸೋಹೆಲ್​ (62) ಹಾಗೂ ಜಾವೇದ್​ ಮಿಯಂದಾದ್​ (40) ಉತ್ತಮ ಆಟವಾಡಿದ್ದರು. 10 ಓವರ್​ ಬೌಲಿಂಗ್​ ಮಾಡಿದ್ದ ಸಚಿನ್​ 37 ರನ್​ ನೀಡಿ ಅಮೀರ್​ ಸೋಹೆಲ್​ರ ವಿಕೆಟ್​ ಉರುಳಿಸಿದ್ದರು. ಅದರಲ್ಲೂ ಕೊನೇ 8 ವಿಕೆಟ್​ಗಳನ್ನು ಪಾಕಿಸ್ತಾನ ಕೇವಲ 68 ರನ್​ಗೆ ಕಳೆದುಕೊಂಡಿದ್ದರಿಂದ 48.1 ಓವರ್​ಗಳಲ್ಲಿ 173 ರನ್​ಗೆ ಆಲೌಟ್​ ಆಗಿತ್ತು. ಭಾರತ 43 ರನ್​ನಿಂದ ಗೆಲುವು ಸಾಧಿಸಿತ್ತು. ಇದೇ ಸಮಯದಲ್ಲಿ ವಿಕೆಟ್​ ಕೀಪರ್​ ಕಿರಣ್​ ಮೋರೆಗೆ ಜಾವೆದ್​ ಮಿಯಂದಾದ್​ ಕೆಣಕಿ ಸುದ್ದಿಯಾಗಿದ್ದರು.

    ಭಾರತ: 49 ಓವರ್​ಗಳಲ್ಲಿ 7 ವಿಕೆಟ್​ಗೆ 216 (ಸಚಿನ್​ 54, ಜಡೇಜಾ 46, ಕಪಿಲ್​ದೇವ್​ 35, ಮುಷ್ತಾಕ್​ ಅಹ್ಮದ್​ 59ಕ್ಕೆ 3, ಅಕೀಬ್​ ಜಾವೇದ್​ 28ಕ್ಕೆ 2), ಪಾಕಿಸ್ತಾನ: 48.1 ಓವರ್​ಗಳಲ್ಲಿ 173 (ಅಮೀರ್​ ಸೋಹೆಲ್​ 62, ಮಿಯಂದಾದ್​ 40, ಮನೋಜ್​ ಪ್ರಭಾಕರ್​ 22ಕ್ಕೆ 2, ಕಪಿಲ್​ದೇವ್​ 30ಕ್ಕೆ 2, ಸಚಿನ್​ 37ಕ್ಕೆ 1). ಪಂದ್ಯಶ್ರೇಷ್ಠ: ಸಚಿನ್​ ತೆಂಡುಲ್ಕರ್​

    1996: ಬೆಂಗ್ಳೂರಲ್ಲಿ ಕ್ವಾರ್ಟರ್​ಫೈನಲ್​ ಕಾದಾಟ
    2ನೇ ಬಾರಿಗೆ ಭಾರತ ವಿಶ್ವಕಪ್​ನಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದು 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್​ಫೈನಲ್​ನಲ್ಲಿ. ಮೊದಲ ವಿಕೆಟ್​ಗೆ ನವಜೋತ್​ ಸಿಂಗ್​ ಸಿಧು (93) ಜತೆಗೂಡಿ 90 ರನ್​ ಪೇರಿಸಿದ್ದ ಸಚಿನ್​ (31ರನ್​, 59ಎಸೆತ, 3ಬೌಂಡರಿ), 5 ಓವರ್​ ಬೌಲಿಂಗ್​ ಕೂಡ ಮಾಡಿದ್ದರು. ಅಜಯ್​ ಜಡೇಜಾ ಕೊನೇಕ್ಷಣದಲ್ಲಿ ಸಿಡಿದು 25 ಎಸೆತಗಳಲ್ಲಿ 45 ರನ್​ ದೋಚಿದ ಪರಿಣಾಮ ಭಾರತ 8 ವಿಕೆಟ್​ಗೆ 287 ರನ್​ಗಳ ಉತ್ತಮ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕ ಅಮೀರ್​ ಸೋಹೆಲ್​ (55) ಅರ್ಧಶತಕ ಹಾಗೂ ಸಯೀದ್​ ಅನ್ಮರ್​ (48) ಪ್ರತಿರೋಧ ತೋರಿದರಾದರೂ ಪಾಕ್​ 49 ಓವರ್​ಗಳಲ್ಲಿ 9 ವಿಕೆಟ್​ಗೆ 248 ರನ್​ ಬಾರಿಸಿ ಸೋಲೊಪ್ಪಿತ್ತು. ಇದು ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಹಗಲು ರಾತ್ರಿ ಪಂದ್ಯವಾಗಿತ್ತು. ಜಾವೆದ್​ ಮಿಯಂದಾದ್​ರ ಕೊನೇ ಏಕದಿನ ಪಂದ್ಯ ಎನ್ನುವುದು ವಿಶೇಷ. ಎಲ್ಲಕ್ಕಿಂತ ಮುಖ್ಯವಾಗಿ ಅಮೀರ್​ ಸೋಹೆಲ್​ ಕೆಣಕ್ಕಿದ್ದಕ್ಕಾಗಿ ಮರು ಎಸೆತದಲ್ಲೇ ಅವರನ್ನು ಪೆವಿಲಿಯನ್​ಗಟ್ಟಿದ ವೆಂಕಟೇಶ್​ ಪ್ರಸಾದ್​ರ ಅಮೋಘ “ಸೆಂಡ್​ ಆಫ್​’ ಪ್ರಕರಣವನ್ನು ಇನ್ನೂ ಯಾರೂ ಮರೆತಿಲ್ಲ. ಭಾರತ 39 ರನ್​ನಿಂದ ಪಂದ್ಯ ಜಯಿಸಿತ್ತು. ಈ ಪಂದ್ಯ ಗೆದ್ದ ಬಳಿಕ ಟೀಮ್​ ಹೋಟೆಲ್​ನಲ್ಲಿ ಆಟಗಾರರನ್ನು ರಾಜರಂತೆ ಸತ್ಕರಿಸಲಾಯಿತು ಎಂದು ಸಚಿನ್​ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

    ಭಾರತ 8 ವಿಕೆಟ್​ಗೆ 287 (ಸಿಧು 93, ಜಡೇಜಾ 45, ಅಜರುದ್ದೀನ್​ 27, ವಕಾರ್​ ಯೂನಿಸ್​ 67ಕ್ಕೆ 2, ಮುಸ್ತಾಕ್​ ಅಹ್ಮದ್​ 56ಕ್ಕೆ 2). ಪಾಕಿಸ್ತಾನ: 49 ಓವರ್​ಗಳಲ್ಲಿ 9 ವಿಕೆಟ್​ಗೆ 248 (ಅಮೀರ್​ ಸೋಹೆಲ್​ 55, ಅನ್ವರ್​ 48, ವೆಂಕಟೇಶ್​ ಪ್ರಸಾದ್​ 45ಕ್ಕೆ 3, ಅನಿಲ್​ ಕುಂಬ್ಳೆ 48ಕ್ಕೆ 3). ಪಂದ್ಯಶ್ರೇಷ್ಠ: ನವಜೋತ್​ ಸಿಂಗ್​ ಸಿಧು

    1999: ವೆಂಕಿ ದಾಳಿಗೆ ಪಾಕ್​ ಮಂಕು
    1999ರ ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್​ ಸಿಕ್ಸ್​ನಲ್ಲಿ ಮುಖಾಮುಖಿಯಾಗಿದ್ದವು. ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲಿ ಜೂನ್​ 8ರಂದು ಪಂದ್ಯ ನಡೆದಿತ್ತು. ಒಂದೆಡೆ ಭಾರತ&ಪಾಕ್​ ಇಂಗ್ಲೆಂಡ್​ನಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದರೆ, ಇತ್ತ, ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತದ ಮೇಲೆ ಕಾಲುಕೆರೆದು ಯುದ್ಧಕ್ಕೆ ಇಳಿದಿತ್ತು. ಹಾಗಾಗಿ ಕ್ರಿಕೆಟ್​ ಮೈದಾನದಲ್ಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಹಾಗಿದ್ದರೂ ಮೈದಾನದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಮೂವರ ಬಂಧನ ಹಾಗೂ 9 ಜನರನ್ನು ಮೈದಾನದಿಂದ ಹೊರಕಳಿಸಲಾಗಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ 6 ವಿಕೆಟ್​ಗೆ 227 ರನ್​ ಪೇರಿಸಿತ್ತು. ಆರಂಭಿಕ ಸಚಿನ್​ 45 ರನ್​ ಬಾರಿಸಿದರೆ, ರಾಹುಲ್​ ದ್ರಾವಿಡ್​ (61) ಹಾಗೂ ನಾಯಕ ಅಜರುದ್ದೀನ್​ (59) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. ಮೊತ್ತ ಬೆನ್ನಟ್ಟುವಾಗ ಸಯೀದ್​ ಅನ್ವರ್​ (36) ಅಬ್ಬರಿಸಿದರಾದರೂ, ವೆಂಕಟೇಶ್​ ಪ್ರಸಾದ್​ (27ಕ್ಕೆ 5) ಮಾರಕ ದಾಳಿ ಮುಂದೆ ವಿಶ್ವಕಪ್​ನಲ್ಲಿ ಸತತ ಮೂರನೇ ಬಾರಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಶರಣಾಯಿತು. 45.3 ಓವರ್​ವರೆಗೂ ಇನಿಂಗ್ಸ್​ ಬೆಳೆಸಿದ ಪಾಕಿಸ್ತಾನ 180 ರನ್​ ಬಾರಿಸಿ 47 ರನ್​ನಿಂದ ಸೋಲು ಕಂಡಿತು.

    ಭಾರತ 6 ವಿಕೆಟ್​ಗೆ 227 (ದ್ರಾವಿಡ್​ 61, ಅಜರುದ್ದೀನ್​ 59, ಸಚಿನ್​ 45, ವಾಸಿಮ್​ ಅಕ್ರಂ 27ಕ್ಕೆ 2, ಅಜರ್​ ಮಹಮೂದ್​ 35ಕ್ಕೆ 2), ಪಾಕಿಸ್ತಾನ: 45.3 ಓವರ್​ಗಳಲ್ಲಿ 180 (ಇಂಜುಮಾಮ್​ ಉಲ್​ ಹಕ್​ 41, ಸಯೀದ್​ ಅನ್ವರ್​ 36, ವೆಂಕಟೇಶ್​ ಪ್ರಸಾದ್​ 27ಕ್ಕೆ 5, ಜಾವಗಲ್​ ಶೀನಾಥ್​ 37ಕ್ಕೆ 3). ಪಂದ್ಯಶ್ರೇಷ್ಠ: ವೆಂಕಟೇಶ್​ ಪ್ರಸಾದ್​.

    2003: ಸೆಂಚುರಿಯನ್​ನಲ್ಲಿ ಸಿಡಿದ ಸಚಿನ್​
    ಸಂಪೂರ್ಣ ಹೊಸ ತಂಡವಾಗಿ 2003ರ ವಿಶ್ವಕಪ್​ನಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಭಾರತ 6 ವಿಕೆಟ್​ ಗೆಲುವು ಸಾಧಿಸಿತ್ತು. ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ಸ್​ ಪಾರ್ಕ್​ ಮೈದಾನದಲ್ಲಿ ಮಾರ್ಚ್​ 1ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ, ಸಯೀದ್​ ಅನ್ವರ್​ (101) ಶತಕದ ನೆರವಿನಿಂದ 7 ವಿಕೆಟ್​ಗೆ 273 ರನ್​ ಪೇರಿಸಿತು. ಅನ್ವರ್​ ಹೊರತಾಗಿ ಉಳಿದ ಯಾವ ಪಾಕಿಸ್ತಾನ ಬ್ಯಾಟ್ಸ್​ಮನ್​ ಕೂಡ ಈ ಪಂದ್ಯದಲ್ಲಿ 30ಕ್ಕಿಂತ ಹೆಚ್ಚಿನ ಮೊತ್ತ ಪೇರಿಸಲಿಲ್ಲ. ಮೊತ್ತ ಬೆನ್ನಟ್ಟಿದ ಭಾರತಕ್ಕೆ ಸಚಿನ್​ (98ರನ್​, 75ಎಸೆತ, 12ಬೌಂಡರಿ, 1ಸಿಕ್ಸರ್​) ಭರ್ಜರಿ ಆರಂಭ ನೀಡಿದ್ದರು. ಕೇವಲ 2 ರನ್​ನಿಂದ ಸಚಿನ್​ ಶತಕವಂಚಿತರಾದರೂ ಗೆಲುವು ಎಲ್ಲ ಬೇಸರ ಮರೆಸಿತು. ಪ್ರಚಂಡ ವೇಗಿ ಶೋಯಿಬ್​ ಅಖ್ತರ್​ ಎಸೆತದಲ್ಲಿ ಸಚಿನ್​ ಬಾರಿಸಿದಂತೆ “ಅಪ್ಪರ್​ ಕಟ್​’ ಸಿಕ್ಸರ್​ ಬಾರಿಸಿದ ವೀರೇಂದ್ರ ಸೆಹ್ವಾಗ್​ ಕೂಡ ಪ್ರಖ್ಯಾತರಾದರು. ನಾಯಕ ಗಂಗೂಲಿ ಮೊದಲ ಎಸೆತದಲ್ಲೇ ಔಟಾದರೆ, ಯುವರಾಜ್​ (50*) ಅರ್ಧಶತಕ ಹಾಗೂ ದ್ರಾವಿಡ್​ (44*) ಆಟದಿಂದ ಭಾರತ 45.4 ಓವರ್​ಗಳಲ್ಲಿ 4 ವಿಕೆಟ್​ಗೆ 276 ರನ್​ಗಳಿಸಿ ಗೆಲುವು ಸಾಧಿಸಿತು.

    ಪಾಕಿಸ್ತಾನ: 7 ವಿಕೆಟ್​ಗೆ 273 (ಅನ್ವರ್​ 101, ಯೂನಿಸ್​ ಖಾನ್​ 32, ರಶೀದ್​ ಲತೀಫ್​ 29, ಜಹೀರ್​ 46ಕ್ಕೆ 2, ನೆಹ್ರಾ 74ಕ್ಕೆ 2). ಭಾರತ: 45.4 ಓವರ್​ಗಳಲ್ಲಿ 4 ವಿಕೆಟ್​ಗೆ 276 (ಸಚಿನ್​ 98, ಯುವರಾಜ್​ 50*, ದ್ರಾವಿಡ್​ 44*, ವಕಾರ್​ ಯೂನಿಸ್​ 71ಕ್ಕೆ 2) ಪಂದ್ಯಶ್ರೇಷ್ಠ: ಸಚಿನ್​ ತೆಂಡುಲ್ಕರ್​

    2011: ಮೊಹಾಲಿಯಲ್ಲಿ ಸಚಿನ್​ ಮತ್ತೆ ಸ್ಟಾರ್​
    ಸೆಮಿಫೈನಲ್​ನಲ್ಲಿ ಏರ್ಪಟ್ಟ ಭಾರತ-ಪಾಕ್​ ಮುಖಾಮುಖಿಗೆ ಉಭಯ ದೇಶಗಳ ಪ್ರಧಾನಿಗಳು ಖುದ್ದು ಹಾಜರಿದ್ದು ಪಂದ್ಯ ವೀಸಿದರು. ಧೋನಿ ನಾಯಕತ್ವದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ, ಸಚಿನ್​ಗೆ (85ರನ್​, 115 ಎಸೆತ, 11 ಬೌಂಡರಿ) ಪಾಕಿಸ್ತಾನ ಫೀಲ್ಡರ್​ಗಳು ನೀಡಿದ ಮೂರು ಜೀವದಾನದಿಂದಾಗಿ 9 ವಿಕೆಟ್​ಗೆ 260 ರನ್​ ಪೇರಿಸಿತು. ಸೆಹ್ವಾಗ್​ (38) ಹಾಗೂ ಸುರೇಶ್​ ರೈನಾ (36*) ಉಪಯುಕ್ತ ರನ್​ಗಳಿಸಿದರು. ವಹಾಬ್​ ರಿಯಾಜ್​ 46ರನ್​ಗೆ 5 ವಿಕೆಟ್​ ಉರುಳಿಸಿದರು. ಶಾಹಿದ್​ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಆರಂಭದಿಂದಲೇ ಕಡಿವಾಣ ಹಾಕಿದ ಭಾರತ, 49.5 ಓವರ್​ಗಳಲ್ಲಿ 231 ರನ್​ಗೆ ನಿಯಂತ್ರಿಸಿ 29 ರನ್​ ಗೆಲುವು ಸಾಧಿಸಿತು. ಮಿಸ್ಬಾ ಉಲ್​ ಹಕ್​ (56) ಅರ್ಧಶತಕ ಬಾರಿಸಿದರು. ಭಾರತದ ಪರ ಬೌಲಿಂಗ್​ ನಡೆಸಿದ ನೆಹ್ರಾ, ಜಹೀರ್​, ಹರ್ಭಜನ್​, ಮುನಾಫ್​ ಹಾಗೂ ಯುವರಾಜ್​ ತಲಾ 2 ವಿಕೆಟ್​ ಉರುಳಿಸಿದರು.

    ಭಾರತ: 9 ವಿಕೆಟ್​ಗೆ 260 (ಸಚಿನ್​ 85, ಸೆಹ್ವಾಗ್​ 38, ರೈನಾ 36*, ವಹಾಬ್​ 46ಕ್ಕೆ 5, ಅಜ್ಮಲ್​ 44ಕ್ಕೆ 2), ಪಾಕಿಸ್ತಾನ: 49.5 ಓವರ್​ಗಳಲ್ಲಿ 231 (ಮಿಸ್ಬಾ 56, ಅಫ್ರಿದಿ 19, ಹಫೀಜ್​ 43, ನೆಹ್ರಾ 33ಕ್ಕೆ 2, ಮುನಾಫ್​ 40ಕ್ಕೆ2), ಪಂದ್ಯಶ್ರೇಷ್ಠ: ಸಚಿನ್​ ತೆಂಡುಲ್ಕರ್​

    2015: ಗೆಲುವು ತಂದ ಕೊಹ್ಲಿ ಶತಕ
    ಭಾರತಕ್ಕೆ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ಸವಾಲು ಎದುರಾಯಿತು. ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ 76 ರನ್​ಗಳಿಂದ ಗೆದ್ದ ಭಾರತ ಶುಭಾರಂಭದ ಮೂಲಕ ಭರ್ಜರಿ ಲಯ ಕಂಡುಕೊಂಡಿತು. ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಶಿಖರ್​ ಧವನ್​ (73) ಉತ್ತಮ ಆರಂಭ ಒದಗಿಸಿಕೊಟ್ಟರು. ವಿಶ್ವಕಪ್​ನಲ್ಲಿ ಮೊದಲ ಬಾರಿ ಸಚಿನ್​ ತೆಂಡುಲ್ಕರ್​ ಇಲ್ಲದೆ ಪಾಕಿಸ್ತಾನವನ್ನು ಎದುರಿಸಿದ ಭಾರತಕ್ಕೆ ಅವರ ಬ್ಯಾಟಿಂಗ್​ ಉತ್ತರಾಧಿಕಾರಿ ವಿರಾಟ್​ ಕೊಹ್ಲಿ (107) ಶತಕದ ಬಲ ತುಂಬಿದರು. 2ನೇ ವಿಕೆಟ್​ಗೆ ಧವನ್​ ಜತೆ 129 ರನ್​ ಮತ್ತು 3ನೇ ವಿಕೆಟ್​ಗೆ ಸುರೇಶ್​ ರೈನಾ (74) ಜತೆ 110 ರನ್​ ಸೇರಿಸಿ ಕೊಹ್ಲಿ ಭಾರತಕ್ಕೆ ಭರ್ತಿ 300 ರನ್​ ಕಲೆಹಾಕಲು ನೆರವಾದರು. ಪ್ರತಿಯಾಗಿ ಪಾಕ್​, ವೇಗಿ ಮೊಹಮದ್​ ಶಮಿ (35ಕ್ಕೆ 4) ದಾಳಿಗೆ 47 ಓವರ್​ಗಳಲ್ಲಿ 224 ರನ್​ಗೆ ಕುಸಿಯಿತು. ಯೂನಿಸ್​ ಖಾನ್​ರನ್ನು (6) ಆರಂಭಿಕರನ್ನಾಗಿ ಕಣಕ್ಕಿಳಿಸಿದ ಪಾಕ್​ ತಂತ್ರ ಕೈಗೂಡಲಿಲ್ಲ. ನಾಯಕ ಮಿಸ್ಬಾ ಉಲ್​ ಹಕ್​ (76) ಏಕಾಂಗಿ ಹೋರಾಟವೂ ಸಾಕಾಗಲಿಲ್ಲ.

    ಭಾರತ: 7 ವಿಕೆಟ್​ಗೆ 300 (ರೋಹಿತ್​ 15, ಧವನ್​ 73, ವಿರಾಟ್​ ಕೊಹ್ಲಿ 107, ರೈನಾ 74, ಸೋಹೈಲ್​ ಖಾನ್​ 55ಕ್ಕೆ 5), ಪಾಕಿಸ್ತಾನ: 47 ಓವರ್​ಗಳಲ್ಲಿ 224 (ಶೆಹಜಾದ್​ 47, ಮಿಸ್ಬಾ 76, ಅಫ್ರಿದಿ 22, ಶಮಿ 35ಕ್ಕೆ 4, ಮೋಹಿತ್​ ಶರ್ಮ 35ಕ್ಕೆ 2). ಪಂದ್ಯಶ್ರೇಷ್ಠ: ವಿರಾಟ್​ ಕೊಹ್ಲಿ

    2019: ರೋಹಿತ್​ ಶತಕಕ್ಕೆ ಬೆಚ್ಚಿದ ಪಾಕಿಸ್ತಾನ
    ಮ್ಯಾಂಚೆಸ್ಟರ್​ನಲ್ಲಿ ನಡೆದ ಪಂದ್ಯ ಉಭಯ ತಂಡಗಳಿಗೂ ವಿಶ್ವಕಪ್​ನ ಮೊದಲ ಪಂದ್ಯವಾಗಿತ್ತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ತಂಡಕ್ಕೆ ರೋಹಿತ್​ ಶರ್ಮ (140 ರನ್​, 113 ಎಸೆತ, 14 ಬೌಂಡರಿ, 3 ಸಿಕ್ಸರ್​) ಶತಕದ ಸಾಹಸದಿಂದ 5 ವಿಕೆಟ್​ಗೆ 336 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಕನ್ನಡಿಗ ಕೆಎಲ್​ ರಾಹುಲ್​ (57) ಮತ್ತು ರೋಹಿತ್​ ಮೊದಲ ವಿಕೆಟ್​ಗೆ 136 ರನ್​ ಪೇರಿಸಿ ಭದ್ರ ಬುನಾದಿ ಹಾಕಿಕೊಟ್ಟರೆ, ಬಳಿಕ ನಾಯಕ ವಿರಾಟ್​ ಕೊಹ್ಲಿ (77) ಉಪಯುಕ್ತ ಆಟವಾಡಿ ಮೊತ್ತ ಏರಿಸಿದರು. 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಧೋನಿ ಒಂದೇ ರನ್​ ಗಳಿಸಿ ಔಟಾಗಿದ್ದರು. ಪ್ರತಿಯಾಗಿ ನಿಧಾನಗತಿ ಆರಂಭ ಪಡೆದ ಪಾಕಿಸ್ತಾನ, ಖರ್​ ಜಮಾನ್​ (62), ಬಾಬರ್​ ಅಜಮ್​ (48) 2ನೇ ವಿಕೆಟ್​ ನಡೆಸಿದ ಶತಕದ ಜತೆಯಾಟದಿಂದ ಪ್ರತಿರೋಧ ತೋರಿತು. ಆದರೆ ಪಾಕ್​ 35 ಓವರ್​ಗಳಲ್ಲಿ 6 ವಿಕೆಟ್​ಗೆ 166 ರನ್​ ಗಳಿಸಿ ಸಂಕಷ್ಟದಲ್ಲಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಬಳಿಕ ಆಟ ಮುಂದುವರಿದಾಗ ಪಾಕ್​ಗೆ ಡಕ್ವರ್ತ್​-ಲೂಯಿಸ್​ ನಿಯಮದನ್ವಯ 40 ಓವರ್​ಗಳಲ್ಲಿ 302 ರನ್​ ಗಳಿಸುವ ಸವಾಲು ಎದುರಾಯಿತು. ಅಂದರೆ ಪಾಕ್​ಗೆ 30 ಎಸೆತಗಳಲ್ಲಿ 136 ರನ್​ ಗಳಿಸುವ ಅಸಾಧ್ಯ ಸವಾಲು ಎದುರಾಗಿತ್ತು. ಅಂತಿಮವಾಗಿ 6 ವಿಕೆಟ್​ಗೆ 212 ರನ್​ ಗಳಿಸಿದ ಪಾಕ್​ 89 ರನ್​ಗಳಿಂದ ಶರಣಾಯಿತು.

    ಭಾರತ: 50 ಓವರ್​ಗಳಲ್ಲಿ 5 ವಿಕೆಟ್​ಗೆ 336 (ರಾಹುಲ್​ 57, ರೋಹಿತ್​ 140, ಕೊಹ್ಲಿ 77, ಹಾರ್ದಿಕ್​ 26, ಧೋನಿ 1, ಆಮಿರ್​ 47ಕ್ಕೆ 3), ಪಾಕಿಸ್ತಾನ: 40 ಓವರ್​ಗಳಲ್ಲಿ 6 ವಿಕೆಟ್​ಗೆ 212 (ಖರ್​ 62, ಬಾಬರ್​ 48, ಹಫೀಜ್​ 9, ಇಮಾದ್​ 46, ಶಂಕರ್​ 22ಕ್ಕೆ 2, ಹಾದಿಕ್​ 44ಕ್ಕೆ 2, ಕುಲದೀಪ್​ 32ಕ್ಕೆ 2). ಪಂದ್ಯಶ್ರೇಷ್ಠ: ರೋಹಿತ್​ ಶರ್ಮ

    ಡೆಂಘೆ ಜ್ವರದಿಂದಾಗಿ ಶುಭಮಾನ್​ ಗಿಲ್​ಗೆ ತಪ್ಪಿತು ವಿಶ್ವ ನಂ. 1 ಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts