More

    ಮದುವೆ ಊಟ ಸವಿದ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ವಿಜಯವಾಣಿ ಸುದ್ದಿಜಾಲ ಮಾಗಡಿ /ಚನ್ನಪಟ್ಟಣ
    ಚನ್ನಪಟ್ಟಣದಲ್ಲಿ ಭಾನುವಾರ ನಿಗದಿಯಾಗಿದ್ದ ಮದುವೆಯೊಂದರಲ್ಲಿ ಊಟ ಸೇವಿಸಿದ 100ಕ್ಕೂ ಹೆಚ್ಚುಮಂದಿ ಅಸ್ವಸ್ಥಗೊಂಡಿದ್ದಾರೆ.
    ಮಾಗಡಿಯ ವರ, ಚನ್ನಪಟ್ಟಣದ ವಧುವಿನ ವಿವಾಹ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿಯ ಸಭಾಂಗಣದಲ್ಲಿ ನಿಗದಿಯಾಗಿತ್ತು. ಮದುವೆ ಬಳಿಕ ಊಟ ಸೇವಿಸಿದ್ದ ಕೆಲಹೊತ್ತಿನಲ್ಲೇ 100ಕ್ಕೂ ಹೆಚ್ಚುಮಂದಿ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 45ಕ್ಕೂ ಹೆಚ್ಚು ಮಂದಿ, ಮಾಗಡಿಯಲ್ಲಿ 65ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ.


    ಮಾಗಡಿ ಪಟ್ಟಣದ 50ಕ್ಕೂ ಹೆಚ್ಚು ಮಂದಿ ಮದುವೆಗೆಂದು ಬಸ್‌ನಲ್ಲಿ ತೆರಳಿದ್ದರು. ಊಟ ಸವಿದು ಮಾಗಡಿಗೆ ವಾಪಸ್ ಬರುವ ವೇಳೆ ಬಸ್‌ನಲ್ಲಿಯೇ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೆಲವರಿಗೆ ಮನೆಗೆ ಬಂದ ನಂತರ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಬಹುತೇಕರು ಮಾಗಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತಾಗಿ ಚಿಕಿತ್ಸೆ ನೀಡಿದ ಕಾರಣ ಹೆಚ್ಚಿನ ಸಮಸ್ಯೆಯಾಗಿಲ್ಲ. ಜತೆಗೆ ಆರೋಗ್ಯದಲ್ಲಿ ಚೇತರಿಗೆ ಕಂಡುಬಂದಿದೆ.


    ಪಟ್ಟಣದ ಬಿ.ಕೆ. ರಸ್ತೆಯ ಹೊಸಮಸೀದಿ ಸಮೀಪದ ನಿವಾಸಿಗಳಾದ ಜಮೀರ್, ಫಜಾಜ್, ರಿಹಾನ್, ಇಲಿಯಾಜ್, ಸುಹೇಲ್, ೈಜ್, ಜಾಜೀರ್, ಫಾಜೀದ್, ಶಬಾಸ್, ರಿಹಾನ್, ಶಾಜೀಯಾ, ಮುಬೀನಾ ಸೇರಿ 37 ಮಂದಿ ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಪಿ, ಶುಗರ್ ಇರುವ 3 ಮಂದಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಟಸ್ಕಿನ್ ಬಾನು (13)ಎಂಬ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.


    ಆರೋಗ್ಯದಲ್ಲಿ ಏರುಪೇರಾಗಲು ಕಾರಣ ಏನು ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಪುಟಾಣಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದನ್ನು ಕಂಡ ಪಾಲಕರು ಕಣ್ಣೀರು ಸುರಿಸುತ್ತಿದ್ದ ದೃಶ್ಯಮನಕಲಕುವಂತಿತ್ತು.


    ವಿಷಯ ತಿಳಿದ ಹಲವರು ಆಸ್ಪತ್ರೆಯ ಬಳಿ ಜಮಾಯಿಸಿ ನೀರು, ಜೂಸ್ ವಿತರಿಸಿದರು. ಪುರಸಭೆ ಸದಸ್ಯೆ ಫಿರ್ಜೋದ್ ಜಮೀರ್, ಮುಸ್ಲಿಂ ಮುಖಂಡರಾದ ಫವೀಜ್ ಅಹಮದ್, ಇಲಿಯಾಜ್, ರೆಹಮತ್, ನುಸ್‌ರತ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು.


    ಇಪ್ಪತ್ತು ಮಕ್ಕಳು ಸೇರಿ 65 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 13 ವರ್ಷದ ಹೆಣ್ಣು ಮಗು ಹೊರತುಪಡಿಸಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.
    ಡಾ. ಯಶವಂತ್
    ಮಾಗಡಿ ಸರ್ಕಾರಿ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts