More

    ವಿಷವಾಗುತ್ತಿದೆ ಹಾರೋಹಳ್ಳಿ ಜೀವಸೆಲೆ

    ಚೌಕಸಂದ್ರ ಜಯರಾಮನಾಯಕ್ ಹಾರೋಹಳ್ಳಿ
    ಗ್ರಾಮೀಣ ಜನರ ನಿತ್ಯ ಬದುಕಿನ ಜೀವಸೆಲೆಯಾಗಿದ್ದ ಕೆರೆಗಳು ಇಂದು ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೆ ಸಂಪೂರ್ಣ ಸೊರಗುತ್ತಿವೆ.
    ಇದಕ್ಕೆ ಪಟ್ಟಣದ ಹೃದಯ ಭಾಗದಲ್ಲಿರುವ ದೊಡ್ಡಕೆರೆಯೇ ನಿದರ್ಶನವಾಗಿದೆ. ಈ ಹಿಂದೆ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಹಾಗೂ ಜನ ಜಾನುವಾರುಗಳಿಗೆ ದಾಹ ನೀಗಿಸುತ್ತಿದ್ದ ಈ ಕೆರೆ ಇಂದು ಸಂಪೂರ್ಣ ಮಲೀನವಾಗಿದೆ. ಜನರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


    ದಿನೇದಿನೆ ಹಾರೋಹಳ್ಳಿ ಪಟ್ಟಣ ಬೆಳೆಯುತ್ತಿದ್ದು, ಪಟ್ಟಣದಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದಲ್ಲಿರುವ ತ್ಯಾಜ್ಯ, ಕಲುಷಿತ ಹಾಗೂ ಶೌಚಗೃಹದ ಕೊಳಚೆ ಪಟ್ಟಣದ ದೊಡ್ಡಕೆರೆಗೆ ಸೇರುತ್ತಿದ್ದು, ಇದರಿಂದ ಹಾರೋಹಳ್ಳಿಯ ದೊಡ್ಡಕೆರೆಯ ನೀರು ಬಳಕೆಗೆ ಯೋಗ್ಯವಲ್ಲದಂತಾಗಿದೆ.


    ಪಟ್ಟಣದ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಸೇರಿ ಎಲ್ಲ ಮೂಲಗಳಿಂದ ಉತ್ಪತ್ತಿಯಾಗುವ ವಿಷ ವಸ್ತುಗಳು ಕೆರೆಗೆ ಸೇರುತ್ತಿವೆ. ಇದರಿಂದ ಕೆರೆ ಕಲುಷಿತವಾಗುವ ಜತೆಗೆ ದುರ್ನಾತ ಬೀರುವ ಜಾಗವಾಗಿ ಮಾರ್ಪಟ್ಟಿದೆ.
    ಒಂದು ಕಾಲದಲ್ಲಿ ಶುದ್ಧ ನೀರು ಕೊಡುತ್ತಿದ್ದ ದೊಡ್ಡಕೆರೆ ಇಂದು ವಿಷಯುಕ್ತವಾಗಿರುವುದು ದುರ್ದೈವ. ಕೆರೆಗೆ ಸೇರುತ್ತಿರುವ ಕೊಳಚೆ ಹಾಗೂ ವಿಷಯುಕ್ತ ನೀರನ್ನು ತಡೆಯುವ ಜತೆಗೆ ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.

    ಸಾಂಕ್ರಾಮಿಕ ಭೀತಿ
    ಆಡಳಿತ ವರ್ಗ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾರೋಹಳ್ಳಿಯ ದೊಡ್ಡಕೆರೆಯನ್ನು ಉಳಿಸಿ ಬೆಳೆಸುವ ಹೊಣೆಹೊರಬೇಕಿತ್ತು. ಆದರೆ, ಇದರತ್ತ ಯಾರೂ ಗಮನ ಹರಿಸಿಲ್ಲ. ಹಾರೋಹಳ್ಳಿ ಪಟ್ಟಣದ ಜನರು ಆರೋಗ್ಯ ಹದಗೆಡುವ ಜತೆಗೆ ರೋಗರುಜಿನಗಳ ಭಯದಿಂದ ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ.

    ಜನಪ್ರತಿನಿಧಿಗಳ ನಿರ್ಲಕ್ಷ್ಯ
    ಹತ್ತಾರು ವರ್ಷಗಳಿಂದಲೂ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಬಣ್ಣ ಬಣ್ಣದ ಮಾತುಗಳು ಭರವಸೆಯಾಗಿಯೇ ಉಳಿದಿವೆ. ಕೆರೆಯ ಸ್ವಚ್ಛತೆಯಾಗಲಿ, ನಿರ್ವಹಣೆಯಾಗಲಿ ಮಾಡದೇ ನಿರ್ಲಕ್ಷ್ಯ ತೋರಿರುವುದು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


    ಪ್ರಭಾವಿಗಳಿಂದ ಒತ್ತುವರಿ
    ಈ ಹಿಂದೆ ಕೆರೆ ದೊಡ್ಡದಾಗಿತ್ತು. ಪಟ್ಟಣವು ಬೆಳೆದಂತೆಲ್ಲ ಪ್ರಭಾವಿಗಳಿಂದ ಕೆರೆ ಒತ್ತುವರಿ ನಡೆಯುತ್ತಲೇ ಬಂದಿದೆ. ಒತ್ತುವರಿ ತೆರವುಗೊಳಿಸುವ ಜತೆಗೆ ಪಟ್ಟಣದಿಂದ ಹರಿದು ಬರುವ ಕೊಳಚೆಯನ್ನು ಶುದ್ಧೀಕರಿಸಿ ಬಿಡುವ ವ್ಯವಸ್ಥೆಯಾಗಬೇಕು. ದೊಡ್ಡಕೆರೆಯ ಪಕ್ಕದಲ್ಲಿ ಹಾರೋಹಳ್ಳಿ ಬಸ್ ನಿಲ್ದಾಣವಿದ್ದು, ಅದರ ಕೊಳಯನ್ನೂ ನೇರವಾಗಿ ಕೆರೆಗೆ ಬಿಡಲಾಗಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಕೆರೆಯ ಉಳಿವಿಗೆ ಕ್ರಮ ಕೈಗೊಳ್ಳಬೇಕಿದೆ.

    ಹಾರೋಹಳ್ಳಿ ದೊಡ್ಡಕೆರೆ ದಿನೇದಿನೆ ಕಲುಷಿತಗೊಳ್ಳುತ್ತಿದ್ದು, ಇದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣ. ಶೀಘ್ರವೇ ಇದರ ಸ್ವಚ್ಛತೆ ಹಾಗೂ ನಿರ್ವಹಣೆಯತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ.
    ಶೇಷಾದ್ರಿರಾಮು, ಸಾಮಾಜಿಕ ಕಾರ್ಯಕರ್ತ.



    ಪಟ್ಟಣದ ದೊಡ್ಡ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸುಮಾರು ನಾಲ್ಕು ಕೋಟಿ ರೂ. ಅನುದಾನವನ್ನು ಸಂಸದ ಡಿ.ಕೆ.ಸುರೇಶ್ ಬಿಡುಗಡೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಶೀಘ್ರ ಕೆರೆ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.

    ಶ್ವೇತಾಬಾಯಿ, ಪಪಂ ಮುಖ್ಯ ಅಧಿಕಾರಿ, ಹಾರೋಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts