More

    ರಿಪ್ಪನ್‌ಪೇಟೆ ಸುತ್ತಮುತ್ತ ಕಂದಾಯ ಭೂಮಿ ಎಗ್ಗಿಲ್ಲದೆ ಕಬಳಿಕೆ

    ರಿಪ್ಪನ್‌ಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯ ಕಬಳಿಕೆ ಮುಂದುವರಿದಿದ್ದು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಬಾಳೂರು ಗ್ರಾಪಂ ವ್ಯಾಪ್ತಿಯ ಕುಕ್ಕಳಲೆ ಗ್ರಾಮದ ಸರ್ವೇ ನಂ.13ರಲ್ಲಿ 497 ಎಕರೆ ಕಂದಾಯ ಭೂಮಿಯಿದೆ. ಅದರಲ್ಲಿ 95 ಎಕರೆ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರಾಗಿದೆ. ಈ ಭೂ ಪ್ರದೇಶದ ವ್ಯಾಪ್ತಿಯಲ್ಲಿ ಒಂದಷ್ಟು ಅರಣ್ಯವಿದ್ದು ಇಲ್ಲಿ ನರೇಗಾ ಯೋಜನೆಯಡು ಕಾಡು ಬೆಳೆಸುವ ಉದ್ದೇಶವಿತ್ತು. ಆದಕಾರಣ ಕಂದಕ ನಿರ್ಮಿಸಿ ಭೂ ಒತ್ತುವರಿ ಆಗದಂತೆ ಕ್ರಮಕೈಗೊಳ್ಳಲಾಗಿತ್ತು. ಜತೆಗೆ ಅಲ್ಲಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಗೂ ಆದ್ಯತೆ ನೀಡಲಾಗಿತ್ತು.
    ಆದರೆ ಇದೀಗ ಕೆಲವರು ಪಂಚಾಯಿತಿಗೆ ಮೀಸಲಿಟ್ಟ ಭೂ ಪ್ರದೇಶದಲ್ಲಿ ಗುಡಿಸಲನ್ನು ನಿರ್ಮಿಸಿ ಹಂತ ಹಂತವಾಗಿ ಭೂಮಿ ಅತಿಕ್ರಮಿಸಿಕೊಂಡಿದ್ದಾರೆ. ಅರಣ್ಯ, ಕಂದಾಯ, ಮತ್ತು ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತೆರವಿಗೆ ಕ್ರಮಕೈಗೊಂಡಿದ್ದೇವೆ ಎನ್ನುತ್ತಿದ್ದರೂ ಅದು ಬಾಯಿ ಮಾತಿಗಷ್ಟೇ ಸೀಮಿತವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
    ದುರಂತವೆಂದರೆ ಬಗರ್‌ಹುಕುಂ ಸಾಗುವಳಿ ಮಾಡಿ ಭೂ ಮಂಜೂರಾತಿ ಪಡೆದವರೇ ಈ ಕೃತ್ಯವನ್ನು ಎಸಗುತ್ತಿದ್ದಾರೆ. ಅಲ್ಲದೆ ಕಂದಾಯ ಇಲಾಖೆ ಕೆಲ ನೌಕರರು ಇದಕ್ಕೆ ಶ್ರೀರಕ್ಷೆಯಾಗಿ ನಿಂತಿದ್ದಾರೆ. ಜತೆಗೆ ಈ ಭಾಗದಲ್ಲಿ ಕಂದಾಯ ಭೂಮಿ ಕಡಿಮೆ ಇದ್ದು ಇದನ್ನು ಪೇಟೆಯ ಶ್ರೀಮಂತ ಕುಳಗಳಿಗೆ ಮಾರಲು ಹೊಂಚು ಹಾಕಿದ್ದಾರೆ ಎಂದು ತಿಳಿದುಬಂದಿದೆ.
    ಸಾಲದೆಂಬಂತೆ ಇನ್ನುಳಿದ ಮೂರ‌್ನಾಲ್ಕು ಎಕರೆ ಪ್ರದೇಶದಲ್ಲಿ ಕೆಲವರು ಮರಗಳನ್ನು ಕಡಿದು, ಬೆಂಕಿ ಹಾಕಿ ಸುಟ್ಟು ಜಾಗ ಸಮತಟ್ಟು ಮಾಡಿಕೊಂಡಿದ್ದಾರೆ. ಜತೆಗೆ ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಅದೇ ಮರದ ಕೊಂಬೆಗಳಿಂದ ಬೇಲಿ ಸಹ ನಿರ್ಮಿಸಿಕೊಂಡಿದ್ದಾರೆ. ನಿತ್ಯ ನೂರಾರು ಜನರು ಓಡಾಡುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಹಲವು ದಿನಗಳಿಂದಲೂ ಅಕ್ರಮ ಮರಕಡಿತಲೆ ಮತ್ತು ಭೂ ಅತಿಕ್ರಮವಾಗುತ್ತಿದ್ದರೂ ಯಾವ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಬಾರದಿರುವುದು ಸೋಜಿಗದ ಸಂಗತಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

    ಕುಕ್ಕಳಲೆ ಗ್ರಾಮದ ಸರ್ವೆ ನಂ.13 ರಲ್ಲಿ ಖಾಸಗಿ ವ್ಯಕ್ತಿಗಳು ಭೂಮಿ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಿ ಕೊಡಬೇಕೆಂದು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಕಾಯುತ್ತಿದ್ದೇವೆ.
    ಭರತ್, ಬಾಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts