ಕ್ರೀಡೆ

ಬೌಲರ್​ಗಳನ್ನು ನೋಡಲ್ಲ, ನನಗೆ ಕಿಂಚಿತ್ತು ಭಯವಿಲ್ಲ! ಎದುರಾಳಿ ತಂಡಗಳಿಗೆ ಶತಕ 'ವೈಭವ' ಸಂದೇಶ | Vaibhav Suryavanshi

Vaibhav Suryavanshi: ನಿನ್ನೆ (ಏ.28) ರಾಜಸ್ಥಾನದ ಸವಾಯಿ ಮಾನ್​​ಸಿಂಗ್ ಕ್ರೀಡಾಂಗಣದಲ್ಲಿ ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಯಿತು. ಗುಜರಾತ್ ಟೈಟಾನ್ಸ್​ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಆರ್​ ಪರ ಸ್ಫೋಟಕ ಇನ್ನಿಂಗ್ಸ್​ ಆಡಿದ 14 ವರ್ಷದ ವೈಭವ್ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್​ಗಳ ನೆರವಿನಿಂದ ಶತಕ ಗಳಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನಿಂದ ಗೆಲುವಿನ ಹಳಿಗೆ ತಂದರು. ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್​ ನೋಡಿ ಇದೀಗ ವಿಶ್ವ ಕ್ರಿಕೆಟ್​ ಬೆರಗಾಗಿದೆ.

ಸಚಿನ್​ ತೆಂಡೂಲ್ಕರ್​ ಮೆಚ್ಚುಗೆ

ಯಶಸ್ವಿ ಜೈಸ್ವಾಲ್​ ಮತ್ತು ವೈಭವ್ ಸೂರ್ಯವಂಶಿ ಮೊದಲ ಬಾಲ್​ನಿಂದಲೇ ಗುಜರಾತ್ ಬೌಲರ್​ಗಳ ಬೆವರಿಳಿಸಿದರು. ಇವರಿಬ್ಬರ ಪೈಕಿ ಸ್ಫೋಟಕ ಇನ್ನಿಂಗ್ಸ್​ ನೀಡಿದ ವೈಭವ್​, ಕೇವಲ 36 ಎಸೆತದಲ್ಲಿ ಭರ್ಜರಿ ಶತಕ (101 ರನ್​) ಬಾರಿಸುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದರು. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡ ಸೂರ್ಯವಂಶಿ, ತಂಡಕ್ಕೆ ಗೆಲುವಿನ ಸೂಚನೆಯನ್ನು ಅದಾಗಲೇ ನೀಡಿದ್ದರು.

ಸಚಿನ್ ತೆಂಡೂಲ್ಕರ್ ಅವ​ರಂತಹ ದಿಗ್ಗಜ ಕ್ರಿಕೆಟಿಗರಿಂದ ಅಪಾರ ಮೆಚ್ಚುಗೆ, ಶ್ಲಾಘನೆ ಸ್ವೀಕರಿಸಿರುವ ವೈಭವ್ ಸೂರ್ಯವಂಶಿ, ಕೇವಲ ಐಪಿಎಲ್​ ಪ್ರಿಯರಿಂದ ಮಾತ್ರವಲ್ಲದೇ ವಿದೇಶಿ ಕ್ರಿಕೆಟ್​ ದಿಗ್ಗಜರ ಹುಬ್ಬೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಶೀದ್​ ಖಾನ್​, ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮರಂತಹ ಡೆಂಜರೆಸ್​ ಬೌಲರ್​ಗಳ ಬೆವರಿಳಿಸಿದ ವೈಭವ್​, ಈಗಾಗಲೇ ಎದುರಾಳಿ ತಂಡಗಳಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಸವಾಲಿನ ಸಂದೇಶ ರವಾನಿಸಿದ್ದಾರೆ.

'ಶತಕ' ಕನಸು

ಕೇವಲ 14 ವರ್ಷದಲ್ಲೇ ಈ ಮೈಲಿಗಲ್ಲು ಸಾಧನೆಗೈದ ವೈಭವ್​, ತನ್ನ ಯಶಸ್ಸಿನ ಹಾದಿ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. "ಐಪಿಎಲ್​ನಲ್ಲಿ ಶತಕ ಬಾರಿಸುವುದು ಒಂದು ದೊಡ್ಡ ಕನಸೇ ಆಗಿತ್ತು. ಇಲ್ಲಿ ನನಗೆ ಯಾವುದೇ ಭಯವಿಲ್ಲ. ಜನ ಏನು ಹೇಳ್ತಾರೆ ಅನ್ನೋದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ಉತ್ತಮ ಪ್ರದರ್ಶನ ನೀಡುವುದಷ್ಟೇ. ಆಡಿದ ಮೂರನೇ ಐಪಿಎಲ್​ ಪಂದ್ಯದಲ್ಲಿ ಶತಕ ಗಳಿಸಿದ್ದು ಭಾರೀ ಸಂತಸ ನೀಡಿದೆ. ಕಳೆದ ನಾಲ್ಕು ತಿಂಗಳಿಂದ ಹೆಚ್ಚಿನ ಅವಧಿ ಶ್ರಮಿಸಿದ್ದೇನೆ" ಎಂದರು.

"ನಾನು ಬೌಲರ್​ಗಳನ್ನು ನೋಡುವುದೇ ಇಲ್ಲ. ನನ್ನ ಸಂಪೂರ್ಣ ಗಮನ ಕೇವಲ ಪಂದ್ಯದ ಸ್ಥಿತಿ-ಗತಿ ಮೇಲೆ ಮಾತ್ರ ನಿಂತಿರುತ್ತದೆ. ಯಶಸ್ವಿ ಜೈಸ್ವಾಲ್ ಜೊತೆಗೆ ಬ್ಯಾಟಿಂಗ್ ಮಾಡುವಾಗ ನನ್ನಲ್ಲಿದ್ದ ವಿಶ್ವಾಸ ಮತ್ತಷ್ಟು ಹೆಚ್ಚಿತು. ಕ್ರೀಸ್​ನಲ್ಲಿದ್ದ ಅಷ್ಟು ಸಮಯ ಅವರು ನನ್ನೊಂದಿಗೆ ಆಗಾಗ್ಗೆ ಮಾತನಾಡುತ, ಒಂದಷ್ಟು ಸಲಹೆಗಳನ್ನು ಕೊಡುತ್ತಿದ್ದರು" ಎಂದು ವೈಭವ್ ಹೇಳಿದ್ದಾರೆ,(ಏಜೆನ್ಸೀಸ್).