ಕ್ರೀಡೆ

ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲು: ಮುಖ್ಯ ಕೋಚ್​ ಗೌತಮ್​ ಗಂಭೀರ್​ ಹೇಳಿಕೆ ವೈರಲ್​! Gautam Gambhir

Gautam Gambhir : ಪ್ರವಾಸಿ ಟೀಮ್​ ಇಂಡಿಯಾ, ಆತಿಥೇಯ ಇಂಗ್ಲೆಂಡ್​ ವಿರುದ್ಧದ ತೆಂಡೂಲ್ಕರ್-ಆಂಡರ್ಸನ್ ಟ್ರೋಫಿಯನ್ನು ಸೋಲಿನೊಂದಿಗೆ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಐದು ಟೆಸ್ಟ್​ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಶುಭಮಾನ್​ ಗಿಲ್​ ನೇತೃತ್ವದ ಭಾರತ ತಂಡ ಐದು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಐದು ಶತಕಗಳನ್ನು ಗಳಿಸಿದರೂ, ಭಾರತಕ್ಕೆ ಸೋಲಿನ ಕಹಿ ಅನುಭವವಾಯಿತು.

ಬ್ಯಾಟಿಂಗ್‌ನಲ್ಲಿ ಕೆಳ ಕ್ರಮಾಂಕದ ಸಂಪೂರ್ಣ ವೈಫಲ್ಯ, ಫೀಲ್ಡರ್‌ಗಳು ಮತ್ತು ಬೌಲರ್‌ಗಳ ವೈಫಲ್ಯ ತಂಡದ ಮೇಲೆ ಗಂಭೀರ ಪರಿಣಾಮ ಬೀರಿತು. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾ ಪ್ರದರ್ಶನದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತ್ರ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಇಲ್ಲಿ ನಾನು ಯಾರನ್ನೂ ದೂಷಿಸಲು ಸಿದ್ಧನಿಲ್ಲ ಎಂದಿದ್ದಾರೆ. ಗೆದ್ದರೂ ಅಥವಾ ಸೋತರೂ ಎಲ್ಲ ಆಟಗಾರರು ಒಂದಾಗಿರುತ್ತಾರೆ ಎಂದು ಗಂಭೀರ್​ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಕೆಳ ಕ್ರಮಾಂಕ (8-11 ಸ್ಥಾನಗಳಲ್ಲಿ ಬ್ಯಾಟಿಂಗ್) ಕೇವಲ ಒಂಬತ್ತು ರನ್ ಗಳಿಸಿತು. ಈ ಬಗ್ಗೆ ಕೇಳಿದಾಗ, ಕೆಲವೊಮ್ಮೆ ಕೆಲವರು ವಿಫಲರಾಗುತ್ತಾರೆ. ಇದು ನಿರಾಶಾದಾಯಕವಾಗಿದೆ. ಆದರೆ, ಬೇರೆಯವರಿಗಿಂತ ಹೆಚ್ಚಾಗಿ, ಸ್ವತಃ ಆ ಆಟಗಾರರೇ ನಿರಾಶೆಗೊಳ್ಳುತ್ತಾರೆ. ಏಕೆಂದರೆ, ತಮಗೆ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ ಎಂಬ ನೋವು ಅವರಲ್ಲಿರುತ್ತದೆ. ನಾವು ಮೊದಲ ಇನ್ನಿಂಗ್ಸ್‌ನಲ್ಲಿ 570 ರಿಂದ 580 ರನ್ ಗಳಿಸಿದ್ದರೆ, ನಮ್ಮ ಪ್ರಾಬಲ್ಯ ಮುಂದುವರಿಯುತ್ತಿತ್ತು. ಎಲ್ಲರೂ ನೆಟ್ಸ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದಾಗ್ಯೂ, ಯಾವಾಗಲೂ ಬಯಸಿದ ಫಲಿತಾಂಶಗಳನ್ನು ಕೆಲವೊಮ್ಮೆ ಪಡೆಯದಿರಬಹುದು. ಪರಿಣಿತ ಬ್ಯಾಟ್ಸ್‌ಮನ್‌ಗಳು ಸಹ ವಿಫಲರಾದರು. ಯಾರನ್ನೂ ಪ್ರತ್ಯೇಕಿಸಿ ದೂಷಿಸುವ ಅಗತ್ಯವಿಲ್ಲ ಎಂದು ಗಂಭೀರ್​ ಹೇಳಿದರು.

ಈ ಪಂದ್ಯವನ್ನು ನಾವು ಗೆಲ್ಲಬಹುದಾದ ಹಲವು ಸಂದರ್ಭಗಳಿದ್ದವು. ಆದರೆ, ದುರಾದೃಷ್ಟವಶಾತ್ ನಮಗೆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾವು ಗೆದ್ದರೂ ಅಥವಾ ಸೋತರೂ, ಅದು ಒಂದೇ. ನಾವು ಒಟ್ಟಿಗೆ ಗೆದ್ದರೆ, ಅದು ನಮ್ಮೆಲ್ಲರ ಗೆಲ್ಲುವು. ಅದೇ ರೀತಿ ನಾವು ಒಟ್ಟಿಗೆ ಸೋತರೆ, ಅದು ನಮ್ಮೆಲ್ಲರ ಸೋಲು ಎಂದು ಗಂಭೀರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಬಗ್ಗೆ ಕೇಳಿದಾಗ, ನಾವು ಅವರನ್ನು ಪರಿಣಿತ ಬೌಲರ್ ಆಗಿ ಆಯ್ಕೆ ಮಾಡಿಲ್ಲ. ಬೌಲಿಂಗ್ ಆಲ್‌ರೌಂಡರ್ ಆಗಿ ಆಯ್ಕೆ ಮಾಡಿದ್ದೇವೆ. ಕೆಲವೊಮ್ಮೆ ನಾಯಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಪಂದ್ಯದಲ್ಲಿ ಶಾರ್ದೂಲ್ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದರು. ಅದೇ ರೀತಿ, ಅವರು ಬ್ಯಾಟಿಂಗ್​ನಲ್ಲಿ 1 ಮತ್ತು 4 ರನ್‌ಗಳನ್ನು ಗಳಿಸಿದರು ಎಂದು ಹೇಳಿದರು.

ಅಂದಹಾಗೆ, ಟೀಮ್ ಇಂಡಿಯಾ 2025-27ರ ನಾಲ್ಕನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯನ್ನು ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಪ್ರಾರಂಭಿಸಿದೆ. ಐದು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್​ಗೆ ಪ್ರವಾಸ ಬೆಳೆಸಿರುವ ಭಾರತ, ಹೆಡಿಂಗ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲುಂಡಿದೆ. ಶುಭಮಾನ್ ಗಿಲ್ ಅವರು ಈ ಸರಣಿಯೊಂದಿಗೆ ಟೀಮ್ ಇಂಡಿಯಾದ ಟೆಸ್ಟ್ ನಾಯಕನಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ. ಆದರೆ, ಮೊದಲ ಪಂದ್ಯದಲ್ಲೇ ಸೋಲಿನಿಂದಾಗಿ ನಿರಾಶೆಯನ್ನು ಎದುರಿಸಿದ್ದಾರೆ.

ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಂದಿನ ಬುಧವಾರದಿಂದ ಆರಂಭವಾಗಲಿದೆ. (ಏಜೆನ್ಸೀಸ್​)