ಕ್ರೀಡೆ

ನನ್ನನ್ನು ಬ್ಯಾನ್​ ಮಾಡದಂತೆ ಅಂದು ಪರಿ ಪರಿಯಾಗಿ ಬೇಡಿಕೊಂಡಿದ್ದೆ! ವಿರಾಟ್​ ಕೊಹ್ಲಿ ಶಾಕಿಂಗ್​ ಹೇಳಿಕೆ ವೈರಲ್​

ನವದೆಹಲಿ: ಕ್ರಿಕೆಟ್​ ಮೈದಾನದಲ್ಲಿ ವಿರಾಟ್ ಕೊಹ್ಲಿ ಎಷ್ಟು ಆಕ್ರಮಣಕಾರಿ ಎಂಬುದು ಎಲ್ಲರಿಗೂ ಗೊತ್ತಿದೆ. ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲ ಎದುರಾಳಿ ಆಟಗಾರರು ಏನಾದರೂ ಕೆಣಕಿದರೆ ಕೊಹ್ಲಿ ತನ್ನ ಆಕ್ರಮಣಕಾರಿ ಮನೋಭಾವದಿಂದಲೇ ತಕ್ಕ ಉತ್ತರ ನೀಡುತ್ತಾರೆ. ಈ ಗುಣ ವೃತ್ತಿಜೀವನದ ಆರಂಭದಿಂದಲೂ ಕೊಹ್ಲಿ ಅವರಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್‌ಗೆ ಹೆಸರಾದ ಆಸ್ಟ್ರೇಲಿಯಾದ ಆಟಗಾರರನ್ನು ಅವರದೇ ಮೈದಾನದಲ್ಲಿ ಕೆಣಕಿದ ಆಟಗಾರ ಯಾರೆಂದು ಪ್ರಶ್ನಿಸಿದರೆ ಥಟ್ಟನೆ ವಿರಾಟ್​ ಕೊಹ್ಲಿ ಎನ್ನುತ್ತಾರೆ. ಆದರೆ, ಇದೇ ಗುಣ ಒಮ್ಮೆ ಕೊಹ್ಲಿಗೆ ದೊಡ್ಡ ಸಮಸ್ಯೆಯನ್ನೇ ತಂದೊಡ್ಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದಲೇ ನಿಷೇಧ ಎದುರಿಸುವ ಪರಿಸ್ಥಿತಿ ಎದುರಾಗಿತ್ತು.

ಸುಮಾರು 12 ವರ್ಷಗಳ ಹಿಂದೆ ನಡೆದ ಈ ಘಟನೆಯ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿದೆ. 2012ರಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲು ಧೋನಿ ನಾಯಕತ್ವದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಗೌತಮ್​ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್​ರಂತಹ ದಿಗ್ಗಜ ಆಟಗಾರರು ತಂಡದಲ್ಲಿದ್ದರು.

ಸಿಡ್ನಿ ಕ್ರಿಕೆಟ್​​ ಗ್ರೌಂಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನದಂದು, ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಕ್ರೀಡಾಂಗಣದಲ್ಲಿ ಕುಳಿತಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳು ಕೆಲವು ಕಾಮೆಂಟ್‌ಗಳನ್ನು ಮಾಡಿದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಪಂದ್ಯದ ನಡುವೆ ಮಧ್ಯದ ಬೆರಳನ್ನು ತೋರಿಸಿ, ನಿಂದಿಸಿದರು.

ಈ ಘಟನೆ ನಡೆದ ಮರುದಿನವೇ ಪಂದ್ಯದ ರೆಫ್ರಿ ಕೊಹ್ಲಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ಕೆಲವು ಸುದ್ದಿ ಪತ್ರಿಕೆಗಳನ್ನು ಮುಂದೆ ಇಟ್ಟರು. ಆ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ ಮಧ್ಯದ ಬೆರಳನ್ನು ತೋರಿಸುವ ಚಿತ್ರ ತುಂಬಾ ದೊಡ್ಡದಾಗಿತ್ತು. ಪಂದ್ಯದ ರೆಫ್ರಿ ಇದಕ್ಕೆ ನಿಮ್ಮ ಉತ್ತರ ಏನು ಎಂದು ಕೊಹ್ಲಿಯನ್ನು ಪ್ರಶ್ನಿಸಿದಾಗ, ನಾನದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ, ಕೋಪದಿಂದ ಮಾಡಿದ್ದೇನೆ ಮತ್ತು ನನ್ನಿಂದ ತಪ್ಪಾಗಿದೆ ಎಂದು ತಕ್ಷಣ ಒಪ್ಪಿಕೊಂಡರು. ಅಲ್ಲದೆ, ತನ್ನನ್ನು ನಿಷೇಧ ಮಾಡದಂತೆ ಮನವಿ ಮಾಡಿಕೊಂಡರು.

ಆಗಷ್ಟೇ ಕ್ರಿಕೆಟ್​ನಲ್ಲಿ ಬೆಳೆಯುತ್ತಿರುವ ಕೊಹ್ಲಿ ಏನೋ ಗೊತ್ತಿಲ್ಲದೇ ಮಾಡಿದ್ದಾರೆ ಅಂತ ಪಂದ್ಯದ ರೆಫರಿ ಭಾವಿಸಿ, ಬ್ಯಾನ್​ ಶಿಕ್ಷೆಯನ್ನು ನೀಡದೆ ಕೊಹ್ಲಿಯ ಪಂದ್ಯ ಶುಲ್ಕವನ್ನು ಶೇ.50ರಷ್ಟು ಕಡಿತಗೊಳಿಸಿ ಆ ಪ್ರಕರಣವನ್ನು ಅಲ್ಲಿಯೇ ಕೈಬಿಟ್ಟರು. ಅಂದು ಮ್ಯಾಚ್ ರೆಫ್ರಿ ಕೊಹ್ಲಿಗೆ ನಿಷೇಧ ಹೇರಿದ್ದರೆ ಕೊಹ್ಲಿ ವೃತ್ತಿ ಬದುಕಿನಲ್ಲಿ ಅದೊಂದು ಅಳಿಸಲಾಗದ ಗುರುತಾಗಿ ಉಳಿಯುತ್ತಿತ್ತು. (ಏಜೆನ್ಸೀಸ್​)