ಕ್ರೀಡೆ

ಜೆರ್ಸಿ ಮೇಲೆ ಭಾರತೀಯ ವೈದ್ಯನ ಹೆಸರು ಹಾಕಿಸಿಕೊಂಡ ಬೆನ್ ಸ್ಟೋಕ್ಸ್..!

ಸೌಥಾಂಪ್ಟನ್: ಮಹಾಮಾರಿ ಕರೊನಾ ವೈರಸ್ ರುದ್ರತಾಂಡವಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ವೈದ್ಯಕೀಯ ಸಿಬ್ಬಂದಿ ಹಗಳಿರುಳು ಈ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಇವರಿಗೆ ಕರೊನಾ ವಾರಿಯರ್ಸ್‌ ಅಂತಾನೇ ಬಿರುದು ನೀಡಲಾಗಿದೆ. ಇದಕ್ಕೆ ವಿಭಿನ್ನವಾಗಿ ನಿಂತಿರುವ ಇಂಗ್ಲೆಂಡ್ ಕ್ರಿಕೆಟಿಗರು ಕೋವಿಡ್ ವಾರಿಯರ್ಸ್‌ನ ಹೆಸರುಗಳನ್ನು ತಮ್ಮ ಅಭ್ಯಾಸದ ಜೆರ್ಸಿಗಳ ಹಿಂದೆ ಬರೆಸಿಕೊಳ್ಳುವ ಮೂಲಕ ಅವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ನ ಡಾರ್ಲಿಂಗ್ಟನ್‌ನ ದುರ್‌ಹ್ಯಾಂನಲ್ಲಿರುವ ನ್ಯಾಷನಲ್ ಹೆಲ್ತ್ ಸರ್ವೀಸ್ (ಎನ್‌ಎಚ್‌ಎಸ್) ಟ್ರಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲಕ ಡಾ.ವಿಕಾಸ್ ಕುಮಾರ್ ಹೆಸರನ್ನು ಇಂಗ್ಲೆಂಡ್ ನಾಯಕ ಬೆನ್‌ಸ್ಟೋಕ್ಸ್ ಬರೆಸಿಕೊಂಡಿದ್ದಾರೆ.

ಎನ್‌ಎಚ್‌ಎಸ್‌ನ ಐಸಿಯುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ವಿಕಾಸ್ ಕುಮಾರ್ ಶಾಲಾದಿನಗಳಿಂದಲೂ ಉತ್ತಮ ಕ್ರಿಕೆಟಿಗನಾಗಬೇಕು ಎಂದು ಕನಸು ಕಂಡಿದ್ದರು. ಮೂಲತಃ ದೆಹಲಿಯವರಾದ ವಿಕಾಸ್ ಕುಮಾರ್, 3 ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯಕ್ಕೆ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಅನಾಸ್ತೇಷಿಯಾ ತಜ್ಞರಾಗಿರುವ ವಿಕಾಸ್ ಪತ್ನಿ ಹಾಗೂ 2 ವರ್ಷದ ಮಗನೊಂದಿಗೆ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಾಗಿ ಇಂಗ್ಲೆಂಡ್‌ನ ಕ್ರಿಕೆಟ್ ಕ್ಲಬ್‌ಗಳು ರೈಸ್ ದ ಬ್ಯಾಟ್ ಕ್ಯಾಂಪೇನ್ ಆರಂಭಿಸಿದ್ದಾರೆ. ಇದರ ಅಂಗವಾಗಿ ಪ್ರತಿಯೊಬ್ಬರ ಕ್ರಿಕೆಟಿಗರು ಅಭ್ಯಾಸದ ಜೆರ್ಸಿಯಲ್ಲಿ ಕೆಲ ವೈದ್ಯಕೀಯ ಸಿಬ್ಬಂದಿ ಹೆಸರು ಬರೆಸಿಕೊಂಡಿದ್ದಾರೆ. 2019ರ ಏಕದಿನ ವಿಶ್ವಕಪ್‌ನ ಸ್ಟಾರ್ ಆಟಗಾರ, ಸೌಥಾಂಪ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮುನ್ನಡೆಸುತ್ತಿರುವ ಸ್ಟೋಕ್ಸ್ ವಿಕಾಸ್ ಹೆಸರು ಬರೆಸಿಕೊಂಡಿದ್ದಾರೆ.

ನನಗೆ ಕ್ರಿಕೆಟ್ ಆಟಗಾರನಾಗಬೇಕು ಎಂದು ಕನಸಿತ್ತು. ಆದರೆ, ನನ್ನ ಸಹೋದರರು ಅವರಂತೆಯೇ ವೈದ್ಯನಾಗಬೇಕೆಂದು ಹಂಬಲಿಸಿದರು. ನಾನು ವೈದ್ಯಕೀಯ ಪದವಿ ಓದುತ್ತಿದ್ದಾಗ ಕಾಲೇಜು ತಂಡದ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. 3 ವರ್ಷಗಳ ಹಿಂದೆ ನವದೆಹಲಿಯಲ್ಲಿ ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದೆ ಎಂದು ಮೆಲುಕು ಹಾಕಿದ್ದಾರೆ.