71ನೇ ಜನ್ಮದಿನಕ್ಕೆ 'ಹೃದಯ' ಗೆದ್ದ ಸುನೀಲ್​ ಗಾವಸ್ಕರ್ ವಿಶೇಷ​ ಸೇವೆ!

gavaskar
Published on

ಮುಂಬೈ: ಟೀಮ್​ ಇಂಡಿಯಾ ಮಾಜಿ ನಾಯಕರಾದ ಎಂಎಸ್​ ಧೋನಿ ಮತ್ತು ಸೌರವ್​ ಗಂಗೂಲಿ ಅವರ ಬೆನ್ನಲ್ಲೇ ಮತ್ತೋರ್ವ ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಶುಕ್ರವಾರ ಜನ್ಮದಿನದ ಸಂಭ್ರಮ ಆಚರಿಸಿದರು. ಇದೇ ವೇಳೆ ಅವರು ವಿಶೇಷ ಸೇವೆಯೊಂದರ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

71ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರು, ನವಿ ಮುಂಬೈನ ಖರ್​ರ್​ನ ಶ್ರೀ ಸತ್ಯ ಸಾಯಿ ಸಂಜೀವನಿ ಆಸ್ಪತ್ರೆಯ ಮಕ್ಕಳ ಹಾರ್ಟ್​ ಕೇರ್​ನಲ್ಲಿ 35 ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸಲಾಗದೆ ಸಂಕಷ್ಟದಲ್ಲಿದ್ದ ಪಾಲಕರಿಗೆ ಗಾವಸ್ಕರ್​ ನೆರವಾಗಿದ್ದಾರೆ.

ಸೇವೆ ಸಲ್ಲಿಸಲು ನಮಗೆ ಹಲವಾರು ವಿಧದ ಅವಕಾಶಗಳಿವೆ. ಮಕ್ಕಳು ಕೂಡ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ಅವರು ಎಲ್ಲರ ಕುಟುಂಬದ ಖುಷಿಯಾಗಿರುತ್ತಾರೆ ಮತ್ತು ಭವಿಷ್ಯದ ಭರವಸೆಯಾಗಿರುತ್ತಾರೆ ಎಂದು ಗಾವಸ್ಕರ್​ ಹೇಳಿದ್ದಾರೆ. ಭಾರತ ಪರ 35 ಶತಕ ಸಿಡಿಸಿದ (ಟೆಸ್ಟ್​ನಲ್ಲಿ 34, ಏಕದಿನದಲ್ಲಿ 1) ಸಿಡಿಸಿರುವ ಸಾಧನೆಯ ಹಿನ್ನೆಲೆಯಲ್ಲಿ ಗಾವಸ್ಕರ್​ 35 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸುತ್ತಿದ್ದಾರೆ ಎನ್ನಲಾಗಿದೆ.

ತಮ್ಮ ಸೇವೆಯ ಹಿಂದಿನ ಪ್ರೇರಣೆ ಏನೆಂಬುದನ್ನೂ ವಿವರಿಸಿರುವ ಗಾವಸ್ಕರ್​, ಭಾರತದಲ್ಲಿ ಈಗ ಮಕ್ಕಳ ಜನನದ ವೇಳೆಯೇ ಹೃದಯ ಸಮಸ್ಯೆಗಳು ಸಾಮಾನ್ಯವಾಗಿ ಬಿಟ್ಟಿವೆ. ಹೆಚ್ಚಿನವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಾರೆ. ಹೆಚ್ಚಿನವರು ಬಡತನದಿಂದಾಗಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ.ಹಾರ್ಟ್​ ಟು ಹಾರ್ಟ್ ಫೌಂಡೇಷನ್​ ಜತೆಗೂ ನಾನು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ನೂರಾರು ಮಕ್ಕಳಿಗೆ ಜೀವನವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಗಾವಸ್ಕರ್​ ಈ ಮುನ್ನ ಕರೊನಾ ವೈರಸ್​ ಸಂತ್ರಸ್ತರ ಪರಿಹಾರ ನಿಧಿಗೆ 59 ಲ ರೂ. ದೇಣಿಗೆ ನೀಡಿದ್ದರು. ಭಾರತ ಪರ 35 ಶತಕ ಸಿಡಿಸಿರುವ ಹಿನ್ನೆಲೆಯಲ್ಲಿ ಪಿಎಂ&ಕೇರ್ಸ್​ಗೆ 34 ಲ ರೂ. ಮತ್ತು ಮುಂಬೈ ಪರ 24 ಶತಕ ಸಿಡಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 24 ಲ ರೂ. ದೇಣಿಗೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net