

ಬೆಂಗಳೂರು: ಬಿಸಿಸಿಐ ಅಧ್ಯಕ್ಷರಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬುಧವಾರ 48ನೇ ಜನ್ಮದಿನ ಆಚರಿಸಿದರು. ಈ ವೇಳೆ ಹಾಲಿ-ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಸುರಿಮಳೆಯೇ ಆಯಿತು. ಇದೇ ವೇಳೆ ನಟಿ ನಗ್ಮಾ ಕೂಡ ಗಂಗೂಲಿ ಶುಭಾಶಯಗಳನ್ನು ತಿಳಿಸಿದರು. ಆದರೆ ಇದರ ಬೆನ್ನಲ್ಲೇ ನೆಟ್ಟಿಗರಿಂದ ಭಾರಿ ಟ್ರೋಲ್ಗೆ ಒಳಗಾದರು. ಇದಕ್ಕೆ ಕಾರಣವೇನೆಂದು ಗೊತ್ತೇ?
ಗಂಗೂಲಿ ಅವರನ್ನು ಟ್ಯಾಗ್ ಮಾಡಿ ನಗ್ಮಾ, 'ಹ್ಯಾಪಿ ಬರ್ತ್ಡೇ' ಎಂದು ಬರೆದುಕೊಂಡಿದ್ದರು. ಇದಕ್ಕೆ ಗಂಗೂಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ನಗ್ಮಾ ಟ್ವೀಟ್ನಿಂದ ಅಚ್ಚರಿಗೆ ಒಳಗಾದ ನೆಟ್ಟಿಗರು ಅವರನ್ನು ಟ್ರೋಲ್ ಮಾಡಲಾರಂಭಿಸಿದರು. ಈ ಹಿಂದೆ 2001ರಲ್ಲಿ ಗಂಗೂಲಿ ಹೆಸರು ನಟಿ ನಗ್ಮಾ ಜತೆಗೆ ತಳುಕು ಹಾಕಿಕೊಂಡಿದ್ದುದು ಇದಕ್ಕೆ ಕಾರಣ. ಇಬ್ಬರೂ ಜತೆಯಾಗಿ ಸುತ್ತಾಡಿದ್ದರು ಎಂದು ವರದಿಯಾಗಿದ್ದರೂ, ಈ ಬಗ್ಗೆ ಗಂಗೂಲಿ ಎಂದೂ ಏನನ್ನೂ ಹೇಳಿಲ್ಲ. ಆದರೆ ತಮಿಳು, ಕನ್ನಡ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಗ್ಮಾ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ, 'ನಮ್ಮಿಬ್ಬರ ಸಂಬಂಧದಿಂದಾಗಿ ಗಂಗೂಲಿ ಅವರ ವೃತ್ತಿಜೀವನವೇ ಅಪಾಯಕ್ಕೆ ಸಿಲುಕಿದ್ದರಿಂದ ಪರಸ್ಪರ ದೂರವಾಗಿದ್ದೆವು' ಎಂದು ಹೇಳಿಕೊಂಡಿದ್ದರು. ಈ ಮೂಲಕ ಗಂಗೂಲಿ ಜತೆಗೆ ತಮಗೆ ಪ್ರೀತಿ ಇದ್ದುದು ನಿಜ ಎಂದು ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಅಭಿಮಾನಿಗೆ ಸಹಾಯಹಸ್ತ ಚಾಚಿದ ಟೆನಿಸ್ ತಾರೆ ಬೌಚಾರ್ಡ್!
ಗಂಗೂಲಿ ಪತ್ನಿ ಡೋನಾ ಸಿಟ್ಟಾಗಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದರೆ, ಮತ್ತೆ ಕೆಲವರು ಗಂಗೂಲಿ ಈಗ ಒಳಗೊಳಗೆ ಖುಷಿ ಪಡುತ್ತಿದ್ದಾರೆ ಎಂಬರ್ಥದ ವಿಡಿಯೋ, ಚಿತ್ರಗಳನ್ನು ಪ್ರಕಟಿಸಿ ಟ್ರೋಲ್ ಮಾಡಿದ್ದಾರೆ.