

ಬೆಂಗಳೂರು: ಐಪಿಎಲ್ ಅನಿದಿರ್ಷ್ಟಾವಧಿಗೆ ಮುಂದೂಡಿಕೆಯಾಗಿರುವುದರಿಂದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮರಳಿ ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಅನಿದಿರ್ಷ್ಟಾವಧಿಯವರೆಗೆ ಕಾಯಬೇಕಾಗಿದೆ. ಈ ನಡುವೆ ಧೋನಿ ಬ್ಯಾಟ್ ಹಿಡಿಯದೆ ಒಂದು ವರ್ಷವೇ ಕಳೆದುಹೋಗಿದೆ. ಶುಕ್ರವಾರಕ್ಕೆ ಭರ್ತಿ ಒಂದು ವರ್ಷದ ಹಿಂದೆ ಧೋನಿ ಕೊನೆಯ ಬಾರಿ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದರು ಮತ್ತು ಬ್ಯಾಟ್ ಹಿಡಿದಿದ್ದರು. ಅದು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯ ಭಗ್ನವಾದ ದಿನವೂ ಆಗಿತ್ತು.
ಕಳೆದ ವರ್ಷದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಧೋನಿ ಮತ್ತು ಭಾರತದ ಅಭಿಮಾನಿಗಳಿಗೆ ಕೆಟ್ಟ ದಿನವಾಗಿತ್ತು. ಜುಲೈ 9ರಂದು ಆರಂಭಗೊಂಡ ಪಂದ್ಯ ಮಳೆಯಿಂದಾಗಿ ಮುಂದೂಡಲ್ಪಟ್ಟು ಜುಲೈ 10ರಂದು ಕೊನೆಗೊಂಡಿತ್ತು. ಮೊದಲ ದಿನ ನ್ಯೂಜಿಲೆಂಡ್ ತಂಡ 46.1 ಓವರ್ಗಳಲ್ಲಿ 5 ವಿಕೆಟ್ಗೆ 209 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು ಮತ್ತು ಆ ದಿನ ಮತ್ತೆ ಆಟ ಮುಂದುವರಿಸುವುದು ಸಾಧ್ಯವಾಗಿರಲಿಲ್ಲ. ಐಸಿಸಿ ನಿಯಮದ ಅನ್ವಯ ಆಗ ಪಂದ್ಯವನ್ನು ಮರುದಿನಕ್ಕೆ ಮುಂದೂಡಲಾಗಿತ್ತು. ಇನಿಂಗ್ಸ್ ಮುಂದುವರಿಸಿದ್ದ ನ್ಯೂಜಿಲೆಂಡ್ ತಂಡ, ರಾಸ್ ಟೇಲರ್ ಬಿರುಸಿನ ಆಟದಿಂದ 50 ಓವರ್ಗಳಲ್ಲಿ 8 ವಿಕೆಟ್ಗೆ 239 ರನ್ ಕೂಡಿಹಾಕಿತ್ತು.
ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಭಾರತ ತಂಡ ದೊಡ್ಡ ಆಘಾತವನ್ನೇ ಎದುರಿಸಿತ್ತು. ಆರಂಭಿಕರಾದ ಕೆಎಲ್ ರಾಹುಲ್, ರೋಹಿತ್ ಶರ್ಮ ಜತೆಗೆ ನಾಯಕ ವಿರಾಟ್ ಕೊಹ್ಲಿ ತಲಾ 1 ರನ್ ಗಳಿಸಿ ತಂಡದ ಮೊತ್ತ 5 ರನ್ ಆಗುವಷ್ಟರಲ್ಲೇ ಪೆವಿಲಿಯನ್ಗೆ ಮರಳಿದ್ದರು. ಬಳಿಕ ರಿಷಭ್ (32) ಮತ್ತು ಹಾದಿರ್ಕ್ ಪಾಂಡ್ಯ (32) ತಂಡಕ್ಕೆ ತುಸು ಚೇತರಿಕೆ ನೀಡಿದರು. ಆದರೂ ಮೂರಂಕಿ ಮೊತ್ತ ತಲುಪುವ ಮೊದಲೇ ಭಾರತ ತಂಡ 6 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತ್ತು. ಆಗ ತಂಡಕ್ಕೆ ಮತ್ತೆ ಗೆಲುವಿನ ಆಸೆ ತುಂಬಿದವರೇ ಧೋನಿ ಮತ್ತು ರವೀಂದ್ರ ಜಡೇಜಾ. ಇವರಿಬ್ಬರು 7ನೇ ವಿಕೆಟ್ಗೆ 116 ರನ್ ಕೂಡಿ ಹಾಕಿ ತಂಡವನ್ನು ಮತ್ತೆ ಗೆಲುವಿಗೆ ಹಾದಿಗೆ ತಂದರು.
ಎಂದಿಗಿಂತ ಭಿನ್ನವಾಗಿ ಬಿರುಸಿನ ಬ್ಯಾಟಿಂಗ್ ಮೂಲಕ ರವೀಂದ್ರ ಜಡೇಜಾ (77 ರನ್, 59 ಎಸೆತ, 4 ಬೌಂಡರಿ, 4 ಸಿಕ್ಸರ್) ಗಮನ ಸೆಳೆದರು. ಆದರೆ ಗೆಲುವಿನಿಂದ 32 ರನ್ ದೂರವಿದ್ದಾಗ ಅವರು ಔಟಾದರು. ಆದರೆ ಧೋನಿ ಇನ್ನೂ ಕ್ರೀಸ್ನಲ್ಲಿದ್ದ ಕಾರಣ ಭಾರತೀಯರಿಗೆ ಗೆಲುವಿನ ಆಸೆ ಉಳಿದಿತ್ತು. ಆಗಲೇ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯ ಭಗ್ನಗೊಳ್ಳುವಂಥ ಎಡವಟ್ಟು ನಡೆದುಹೋಯಿತು. 72 ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಸಿಕ್ಸರ್ ಒಳಗೊಂಡ 50 ರನ್ ಗಳಿಸಿದ್ದ ಧೋನಿ ರನೌಟ್ ಬಲೆಗೆ ಬಿದ್ದರು. ಮಾಟಿರ್ನ್ ಗುಪ್ಟಿಲ್ರ ಡೈರೆಕ್ಟ್ ಹಿಟ್ನಿಂದಾಗಿ ಧೋನಿ ಕ್ರೀಸ್ನಿಂದ ಕೇವಲ 2 ಇಂಚಿನಷ್ಟು ಹಿಂದುಳಿದುಬಿಟ್ಟರು. ಆಗ ಭಾರತಕ್ಕೆ 9 ಎಸೆತಗಳಲ್ಲಿ 24 ರನ್ ಗಳಿಸುವ ಕಠಿಣ ಸವಾಲು ಎದುರಾಯಿತು. ಕೊನೆಗೆ ಭಾರತ 49.3 ಓವರ್ಗಳಲ್ಲಿ 221 ರನ್ಗೆ ಸರ್ವಪತನ ಕಂಡು 18 ರನ್ಗಳಿಂದ ಸೋಲೊಪ್ಪಿಕೊಂಡಿತು ಮತ್ತು ವಿಶ್ವಕಪ್ನಲ್ಲಿ ಸತತ 2ನೇ ಬಾರಿ ಸೆಮಿಫೈನಲ್ನಲ್ಲೇ ನಿರಾಸೆ ಅನುಭವಿಸಿತು. ನ್ಯೂಜಿಲೆಂಡ್ ಸತತ 2ನೇ ಬಾರಿ ವಿಶ್ವಕಪ್ ಫೈನಲ್ಗೇರಿತು.
ಧೋನಿ ಆ ರನೌಟ್ ಬಳಿಕ ಎಂದೂ ಮರಳಿ ಮೈದಾನಕ್ಕೆ ಇಳಿದೇ ಇಲ್ಲ. ಗ್ಯುರ್ಸನ್ ಎಸೆತದಲ್ಲಿ ಬಾಲಂಗೋಚಿ ಭುವನೇಶ್ವರ್ ಕುಮಾರ್ಗೆ ಸ್ಟ್ರೆ$ಕ್ ಬಿಟ್ಟುಕೊಡುವುದನ್ನು ತಪ್ಪಿಸುವ ಸಲುವಾಗಿ ಧೋನಿ 2ನೇ ರನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರು. ವಿಕೆಟ್ ನಡುವಿನ ಓಟದಲ್ಲಿ ಧೋನಿ ಪ್ರಗತಿ ಹೊಂದಿದ್ದರೂ, ಗುಪ್ಟಿಲ್ ಅವರ ಚುರುಕಿನ ಫೀಲ್ಡಿಂಗ್ ಮತ್ತು ಡೈರೆಕ್ಟ್ ಹಿಟ್ ಧೋನಿ ಅವರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತ್ತು. 2004ರಲ್ಲಿ ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೂ ರನೌಟ್ ಬಲೆಗೆ ಬಿದ್ದಿದ್ದ ಧೋನಿ 2019ರ ಐಪಿಎಲ್ ಫೈನಲ್ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ರನೌಟ್ ಬಲೆಗೆ ಬಿದ್ದ ಕಾರಣ ಚೆನ್ನೆ$ ಸೂಪರ್ ಕಿಂಗ್ಸ್ ತಂಡದ 1 ರನ್ ಸೋಲನ್ನು ಕಂಡಿದ್ದರು. ಹೀಗೆ ಧೋನಿ ಬದುಕಿನಲ್ಲಿ ರನೌಟ್ ಕಾಡುತ್ತಲೇ ಬಂದಿದ್ದು, ಐಪಿಎಲ್ ಮುಂದೂಡಿಕೆಯಿಂದಾಗಿ ಅವರ ಕ್ರಿಕೆಟ್ ಭವಿಷ್ಯವೂ ಈಗ ಅತಂತ್ರ ಸ್ಥಿತಿಯಲ್ಲಿ ನಿಲ್ಲುವಂತಾಗಿದೆ.