

ನವದೆಹಲಿ: ಮೊಹಾಲಿ ನಡೆದ ಪಂದ್ಯವೊಂದನ್ನು ಶ್ರೀಲಂಕಾದಲ್ಲಿನ ಉವಾ ಟಿ20 ಲೀಗ್ ಪಂದ್ಯದಂತೆ ಆನ್ಲೈನ್ನಲ್ಲಿ ನೇರಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಜನಪ್ರಿಯ ಮೊಬೈಲ್ ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್ ಇಲೆವೆನ್ ವಿರುದ್ಧ ದೂರು ನೀಡಿದೆ. ನಕಲಿ ಟಿ20 ಲೀಗ್ ಪ್ರಕರಣದಲ್ಲಿ ಡ್ರೀಮ್ ಇಲೆವೆನ್ ಯಾವ ರೀತಿಯ ಸಂಬಂಧ ಹೊಂದಿದೆ ಎಂದು ತನಿಖೆ ನಡೆಸುವಂತೆ ಬಿಸಿಸಿಐ, ಪಂಜಾಬ್ ಪೊಲೀಸರಿಗೆ ಮನವಿ ಸಲ್ಲಿಸಿದೆ. ಬಿಸಿಸಿಐ ಪ್ರಮುಖ ಪ್ರಾಯೋಜಕ ಕಂಪನಿಗಳಲ್ಲಿ ಡ್ರೀಮ್ ಇಲೆವೆನ್ ಕೂಡ ಒಂದಾಗಿರುವ ನಡುವೆಯೂ ಅದರ ವಿರುದ್ಧ ದೂರು ಸಲ್ಲಿಸಿರುವುದು ಅಚ್ಚರಿ ಸೃಷ್ಟಿಸಿದೆ.
ಸಾಕಷ್ಟು ಕ್ರಿಕೆಟ್ ಪ್ರೇಮಿಗಳನ್ನು ಸೆಳೆದಿರುವ ಡ್ರೀಮ್ ಇಲೆವೆನ್ ಮತ್ತು ಅದರ ಭಾಗವಾಗಿರುವ ಫ್ಯಾನ್ಕೋಡ್ ಆ್ಯಪ್ ವಿರುದ್ಧ ಬಿಸಿಸಿಐ ದೂರು ದಾಖಲಿಸಿದೆ. ಫ್ಯಾನ್ಕೋಡ್ ವೆಬ್ಸೈಟ್ ಮತ್ತು ಆ್ಯಪ್ ಮೂಲಕ ಉವಾ ಟಿ20 ಲೀಗ್ ಪಂದ್ಯ ನೇರಪ್ರಸಾರ ಕಂಡಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಲೀಗ್ನ ಪಂದ್ಯದಂತೆ ಇದನ್ನು ಪ್ರಸಾರ ಮಾಡಲಾಗಿದೆ. ಆದರೆ ಇದು ಮೊಹಾಲಿಯ ಸವರ ಗ್ರಾಮದಲ್ಲಿ ಆಡಲಾದ ಕ್ಲಬ್ ಕ್ರಿಕೆಟ್ ಪಂದ್ಯವಾಗಿತ್ತು. ಉವಾ ಎಂಬುದು ಶ್ರೀಲಂಕಾದಲ್ಲಿನ ಪ್ರಾಂತ್ಯವೊಂದರ ಹೆಸರಾಗಿದೆ. ಡ್ರೀಮ್ ಇಲೆವೆನ್ ಮತ್ತು ಫ್ಯಾನ್ಕೋಡ್ಗಳು ಸ್ಪೋರ್ಟ್ಸ್ ಟೆಕ್ ಕಂಪನಿಗೆ ಒಳಪಟ್ಟಿದ್ದು, ಭಾರತೀಯರು ಆರಂಭಿಸಿದ ಈ ಕಂಪನಿಯಲ್ಲಿ ಈಗ ಚೀನಾ ಕಂಪನಿಯೂ ಹೂಡಿಕೆ ಮಾಡಿದೆ. ಡ್ರೀಮ್ ಇಲೆವೆನ್ ಐಪಿಎಲ್ನ ಪ್ರಾಯೋಜಕತ್ವ ಹೊಂದಿದೆ.
ಪ್ರಕರಣದಲ್ಲಿ ಡ್ರೀಮ್ ಇಲೆವೆನ್ ಕೂಡ ಒಳಗೊಂಡಿರುವ ಸಾಧ್ಯತೆ ಇದೆ ಎಂದು ಮೊಹಾಲಿ ಪೊಲೀಸರು ತಿಳಿಸಿದ್ದಾರೆ. ಪಂದ್ಯದಲ್ಲಿ ಬಳಸಲಾದ ಕಿಟ್ಗಳು ಈ ಹಿಂದಿನ ಡ್ರೀಮ್ ಇಲೆವೆನ್ ಟೂನಿರ್ಯದ್ದಾಗಿವೆ. ಅಲ್ಲದೆ ಅವುಗಳಲ್ಲಿ ಡ್ರೀಮ್ ಇಲೆವೆನ್ ಎಂದು ಬರೆಯಲಾಗಿದೆ. ಇವುಗಳನ್ನು ನಕಲಿಯಾಗಿಯೂ ಬಳಸಿರಬಹುದು. ಈ ಎರಡೂ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.