ಕ್ರೀಡೆ

ಹನುಮ ವಿಹಾರಿ ಆಂಧ್ರ ಕ್ರಿಕೆಟ್ ಟೀಮ್ ತೊರೆಯಲು ಸಿಎಂ ಜಗನ್​ ಕಾರಣ: ತೆಲುಗು ದೇಶಂ ಪಕ್ಷ ನೇರ ಆರೋಪ

ಆಂಧ್ರಪ್ರದೇಶ: ಸೋಮವಾರ (ಫೆ.26) ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ವಿರುದ್ಧ ಟೀಂ ಇಂಡಿಯಾದ ಆಟಗಾರ ಹನುಮ ವಿಹಾರಿ ತೀವ್ರ ಅಸಮಾಧಾನ ಹೊರಹಾಕಿದ್ದು, ಇನ್ನು ಮುಂದೆ ಆಂಧ್ರ ಪ್ರದೇಶ ಕ್ರಿಕೆಟ್​ ತಂಡದ ಪರವಾಗಿ ನಾನು ಆಡೋದಿಲ್ಲ ಎಂದು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ವಿಹಾರಿ ಆಂಧ್ರ ಕ್ರಿಕೆಟ್​ ತಂಡದಿಂದ ಹೊರಬಂದ ಬೆನ್ನಲ್ಲೇ ಇದು ರಾಜಕೀಯ ಹುನ್ನಾರದಿಂದಲೇ ನಡೆದಿರುವುದು ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.

ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಅವರೊಂದಿಗೆ ಇರುವ ಕೆಲವರಿಂದಲೇ ಹನುಮ ವಿಹಾರಿ ಆಂಧ್ರ ಕ್ರಿಕೆಟ್ ತೊರೆಯಲು ಕಾರಣ ಎಂದು ತೆಲುಗು ದೇಶಂ ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ವರ್ಲಾ ರಾಮಯ್ಯ ನೇರ ಆರೋಪ ಎಸಗಿದ್ದು, ಕಾಪು ಸಮುದಾಯದ ಭರವಸೆಯ ಕ್ರಿಕೆಟಿಗ ವಿಹಾರಿ ಈಗ ಸಿಎಂ ಮತ್ತು ಅವರ ಹಿಂಬಾಲಕರಿಂದ ಆಂಧ್ರಪ್ರದೇಶದ ಪರವಾಗಿ ಆಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

ನಿಮ್ಮ ಪಕ್ಷವಾದ ವೈಎಸ್‌ಆರ್‌ಸಿಪಿ ಕ್ರೀಡೆಯಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಯುವ ಪ್ರತಿಭೆಗಳಿಗೆ ಏಕೆ ಕಿರುಕುಳ ನೀಡುತ್ತಿದೆ” ಎಂದು ರಾಮಯ್ಯ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಆಂಧ್ರಪ್ರದೇಶ ಕ್ರಿಕೆಟ್ ತಂಡವನ್ನು ತೊರೆದಿರುವ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ ಮಾಡಿದ್ದಾರೆ. ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ನಿಂದ ನಡೆಯುತ್ತಿರುವ ರಣಜಿ ಟ್ರೋಫಿಯ ಸೀಸನ್​ನಲ್ಲಿ ಅವಮಾನ ಮತ್ತು ಮುಜುಗರಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ ಎಂದರು.

ಹನುಮ ವಿಹಾರಿ ಮಾಡಿದ ಪೋಸ್​​ನಲ್ಲಿ ಏನಿದೆ? ಮಧ್ಯಪ್ರದೇಶ ವಿರುದ್ಧ ತಂಡ ಸೋಲನ್ನು ಕಂಡ ಬಳಿಕ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಹನುಮ ವಿಹಾರಿ, ಪಶ್ಚಿಮ ಬಂಗಾಳದ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆ ಪಂದ್ಯದ ಸಮಯದಲ್ಲಿ ನಾನು ತಂಡದ 17ನೇ ಆಟಗಾರನಿಗೆ ಸ್ವಲ್ಪ ಗದರಿದೆ. ಆಗ ಆತ ನನ್ನ ಬಗ್ಗೆ ಅವನ ತಂದೆಯ ಬಳಿ ದೂರು ನೀಡಿದ. ಪ್ರತಿಯಾಗಿ ಅವನ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರ ಕ್ರಿಕೆಟ್​ ಮಂಡಳಿಗೆ ಸೂಚನೆ ನೀಡಿದರು. ಬಂಗಾಳದ ವಿರುದ್ಧ ನಾವು 410 ರನ್‌ ಕಲೆಹಾಕಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಸಿದರೂ, ಯಾವುದೇ ತಪ್ಪು ಮಾಡದ ನನಗೆ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಯಿತು ಎಂದು ಹನುಮ ವಿಹಾರಿ ಆರೋಪಿಸಿದ್ದಾರೆ,(ಏಜೆನ್ಸೀಸ್).