ಕ್ರೀಡೆ

ವಿರಾಟ್ ಜತೆಗಿನ ನಿಮ್ಮ​ ಸಂಬಂಧ ಹೇಗಿದೆ? 'ಗೌತಿ' ಕೊಟ್ಟ ಖಡಕ್ ಉತ್ತರಕ್ಕೆ ಪ್ರಶ್ನೆ ಕೇಳಿದವರೇ ಗಪ್​ ಚುಪ್​​!

ಮೋಹನ್​ ಶೆಟ್ಟಿ

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ, ನೂತನ ಹೆಡ್ ಕೋಚ್ ಆಗಿರುವ ಗೌತಮ್​ ಗಂಭೀರ್​ ಮತ್ತು ದಾಖಲೆಗಳ ಸರದಾರ, ಸ್ಟಾರ್​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಮಧ್ಯೆ ಬಹಳ ದಿನಗಳ ಹಿಂದಿನಿಂದಲೂ ದೊಡ್ಡ ಜಟಾಪಟಿ ಇರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದ ಈ ಇಬ್ಬರು ಸ್ಟಾರ್​ ಕ್ರಿಕೆಟಿಗರು ಒಬ್ಬರ ಎದುರಿಗೆ ಮತ್ತೊಬ್ಬರು ಮುಖಾಮುಖಿಯಾಗಿ ಬಂದರೆ ಸಾಕು ಅಲ್ಲಿ ಮಾತಿನ ಚಕಮಕಿ ಜೋರಾಗಿಯೇ ಇರುತ್ತಿತ್ತು. ಕಣ್ಣಲ್ಲೇ ವಾಗ್ವಾದಕ್ಕಿಳಿಯುತ್ತಿದ್ದ ಗೌತಿ ಮತ್ತು ವಿರಾಟ್​ ಜಗಳಗಳಿಗೆ ಅಭಿಮಾನಿಗಳೇ ಸಾಕ್ಷಿ. ಈಗಲೂ ಸಹ ಅವರಿಬ್ಬರ ಜಟಾಪಟಿಯ ವಿಡಿಯೋ ತುಣುಕುಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

ಸದ್ಯ ಇದೆಲ್ಲವೂ ಅಂತ್ಯಗೊಂಡಿದ್ದು, ಗಂಭೀರ್ ಮತ್ತು ಕೊಹ್ಲಿ ನಡುವೆ ಯಾವುದೇ ಮನಸ್ತಾಪ, ವೈಮನಸ್ಸು ಇಲ್ಲ ಎಂದು ಕೆಲವರು ಭಾವಿಸಿದರೆ, ಇನ್ನೂ ಕೆಲವರು ನಾವು ಅಂದುಕೊಂಡಿರುವುದು ತಪ್ಪು. ಇಂದಿಗೂ ಸಹ ಅವರಿಬ್ಬರು ಪರಸ್ಪರ ಮುಖಾಮುಖಿಯಾಗಿ ಮಾತನಾಡುವುದಿಲ್ಲ, ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡಂತಿದೆ ಎಂದು ಅಭಿಪ್ರಾಯಿಸಿದ್ದಾರೆ. ಇದೆಲ್ಲದರ ನಡುವೆ ಇತ್ತೀಚಿಗಷ್ಟೇ ಬಿಸಿಸಿಐ ಜತೆ ಮಾತನಾಡಿರುವ ವಿರಾಟ್​, ತಮ್ಮ ಮತ್ತು ಗೌತಿ ಮಧ್ಯೆಯಿದ್ದ ವಿವಾದಗಳಿಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಹಳೆಯದನ್ನು ಮರೆತು ಮುಂದುವರಿಯಲು ನಾನು ಸಿದ್ಧ ಎಂದು ಹೇಳಿರುವುದಾಗಿ ವರದಿಯೊಂದು ಉಲ್ಲೇಖಿಸಿತ್ತು. ಇದು ವಿರಾಟ್​ ಮತ್ತು ಗಂಭೀರ್​ ಫ್ಯಾನ್ಸ್​ಗಳಲ್ಲಿ ಭಾರೀ ಸಂತಸ ಉಂಟುಮಾಡಿದೆ.

ಇದೆಲ್ಲದರ ನಡುವೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿದ ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್, "ನನ್ನ ಮತ್ತು ವಿರಾಟ್​ ನಡುವಿನ ಸಂಬಂಧ ಇನ್ನೊಬ್ಬರ ಟಿಆರ್​ಪಿಗಲ್ಲ. ಅದು ನಮ್ಮ ಮಧ್ಯೆ ಮಾತ್ರ ಉಳಿದುಕೊಳ್ಳುವಂತಹ ರಿಲೇಷನ್​ಶಿಪ್​. ನಾವಿಬ್ಬರು ಅದೆಷ್ಟೋ ವಿಚಾರಗಳಿಗೆ ಚರ್ಚೆ ನಡೆಸಿದ್ದೇವೆ. ಅವರವರ ಜೆರ್ಸಿಗೆ ಹೊಡೆದಾಡುವ ಹಕ್ಕು ಅವರಿಗಿದೆ" ಎಂದರು. ಗಂಭೀರ್​ ಹೇಳಿಕೆಗಳನ್ನು ಆಲಿಸುತ್ತಿದ್ದಂತೆ ಅನೇಕರು ಅಚ್ಚರಿ ವ್ಯಕ್ತಪಡಿಸಿದರೆ, ಕ್ರಿಕೆಟ್ ಪ್ರಿಯರು ಗೌತಿಯ ಖಡಕ್ ಮಾತಿಗೆ ಫಿದಾ ಆಗಿದ್ದಾರೆ,(ಏಜೆನ್ಸೀಸ್).