ಕ್ರೀಡೆ

17 ಆಟಗಾರರು, 60 ರೂಮ್​ಗಳು… ಬಾಬರ್​ ಆಜಂ ತಂಡಕ್ಕೆ ಛೀಮಾರಿ ಹಾಕಿದ ಪಾಕ್​ನ ಮಾಜಿ ಕ್ರಿಕೆಟಿಗ

ನ್ಯೂಯಾರ್ಕ್​: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್​ ಪಂದ್ಯಾವಳಿಗಳು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಮೊದಲ ಹಂತದಲ್ಲೇ ವಿಶ್ವಕಪ್​ ಸೆಣಸಾಟದಿಂದ ಇದೀಗ ಪಾಕಿಸ್ತಾನ ತಂಡ ಅಧಿಕೃತವಾಗಿ ಹೊರಗುಳಿದಿದೆ. ಸೂಪರ್​ 8 ಕ್ಲ್ಯಾಶ್​ಗೆ ಎಂಟ್ರಿ ಕೊಡಬೇಕಿದ್ದ ಬಾಬರ್ ಆಜಂ ನೇತೃತ್ವದ ಟೀಮ್​, ಹೀನಾಯ ಸೋಲುಗಳನ್ನು ಕಂಡಿದ್ದೇ ಸದ್ಯ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ ಪಾಕ್​ಗೆ ತನ್ನ ದೇಶದ ಮಾಜಿ ಕ್ರಿಕೆಟಿಗರಿಂದಲೇ ಸಾಲು ಸಾಲು ಅವಮಾನ, ಅಪಹಾಸ್ಯಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಟೀಂ ಇಂಡಿಯಾ ವಿರುದ್ಧ ಸೋತ ಪಾಕ್​ ನಾಯಕ ಬಾಬರ್​​ಗೆ ವ್ಯಾಪಕ ಛೀಮಾರಿ ಕೇಳಿಬರುತ್ತಿವೆ. ಮಾಜಿ ಕ್ಯಾಪ್ಟನ್​ ಶಾಹೀದ್ ಅಫ್ರಿದಿ, ಕಮ್ರಾನ್ ಅಕ್ಮಲ್, ಹಫೀಜ್ ಸೇರಿದಂತೆ ಮುಂತಾದವರು ಬಾಬರ್​ ಕ್ಯಾಪ್ಟನ್ಸಿ ಉತ್ತಮವಾಗಿಲ್ಲ. ಅವರ ಮುಂದಾಳತ್ವದಲ್ಲಿ ಗೆಲುವು ನೋಡಲೇ ಇಲ್ಲ ಎಂದು ದೂರಿದ್ದಾರೆ.

ಇನ್ನು ಮಾಜಿ ವಿಕೆಟ್-ಕೀಪರ್, ಬ್ಯಾಟರ್ ಅತೀಕ್-ಉಜ್-ಜಮಾನ್ ಕೂಡ ಪಾಕ್​ ತಂಡವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದು, "ನಾನು ಕಂಡ ಪಾಕಿಸ್ತಾನ ತಂಡವು ಇದಲ್ಲ. ಇವರು ರಾಷ್ಟ್ರೀಯ ಸೇವೆ ಸಲ್ಲಿಸಲು ನ್ಯೂಯಾರ್ಕ್​​ಗೆ ಹೋಗಲಿಲ್ಲ, ಬದಲಿಗೆ ಯಾವುದೋ ರಜೆಯನ್ನು ಕಳೆಯಲು ಹೋದಂತಿತ್ತು. ನೀವು ಅಲ್ಲಿನ ಮೈದಾನಕ್ಕೆ ತೆರಳಿ ಡ್ರಾಮಾ ಮಾಡಿದ್ದೀರಾ ಅಷ್ಟೇ" ಎಂದಿದ್ದಾರೆ.

"17 ಆಟಗಾರರನ್ನು ಒಳಗೊಂಡಿದ್ದ ತಂಡ, 60 ರೂಂ ಬುಕ್ ಮಾಡಿಕೊಂಡಿದ್ದು ಏಕೆ? ಇದೆಂಥಾ ಹಾಸ್ಯಮಯ! ನೀವೇನು ಅಲ್ಲಿಗೆ ಕ್ರಿಕೆಟ್ ಆಡಲು ಹೋಗಿದ್ರೋ ಅಥವಾ ರಜೆ ಕಳೆಯಲು ಹೋಗಿದ್ದ? ಇದರಲ್ಲಿ ಪಾಕ್ ಕ್ರಿಕೆಟ್​ ಮಂಡಳಿಯ ತಪ್ಪು ಕೂಡ ಇದೆ. ಇಂತಹ ಟೂರ್ನಿಯಲ್ಲಿ ಏಕೆ ಕ್ರಿಕೆಟಿಗರು ತಮ್ಮ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗುವಂತ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇವರಿಗೆ (ಆಟಗಾರರು) ಸಂಸ್ಕೃತಿ ಗೊತ್ತೇ ಇಲ್ಲ. ಎಲ್ಲವನ್ನೂ ಬಿಟ್ಟು ಆಟದ ಬಗ್ಗೆ ಹೆಚ್ಚು ಗಮನಹರಿಸಲು ನಿಮ್ಮಿಂದ ಸಾಧ್ಯವಿಲ್ಲವೇ" ಎಂದು ಗರಂ ಆಗಿ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).