ಕ್ರೀಡೆ

ಈತ ಅಕ್ರಮ್​ ಮತ್ತು ಯೂನಿಸ್ ರೀತಿ; ಸಂದೀಪ್​ರನ್ನು ಪಾಕ್ ದಿಗ್ಗಜ​ರಿಗೆ ಹೋಲಿಸಿದ ಮಾಜಿ ಕ್ರಿಕೆಟಿಗ

ನವದೆಹಲಿ: ಕಳೆದ ಎರಡು ತಿಂಗಳಿನಿಂದ ಸತತವಾಗಿ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿರುವ ಐಪಿಎಲ್ 17ನೇ ಆವೃತ್ತಿ ಇದೀಗ ಕೊನೆಯ ಹಂತಕ್ಕೆ ತಲುಪಿದ್ದು, ಇಂದಿನ ಫೈನಲ್ ಮ್ಯಾಚ್​ ಮೂಲಕ ಪೂರ್ಣವಿರಾಮ ಪಡೆಯಲಿದೆ. ಇನ್ನು ಕ್ವಾಲಿಫೈರ್​ 2 ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಪಂದ್ಯ ಕೈಚೆಲ್ಲಿದ ರಾಜಸ್ಥಾನ ರಾಯಲ್ಸ್ ಪರ ಬೌಲರ್​ ಸಂದೀಪ್ ಶರ್ಮಾ, ಅದ್ಭುತ ಬೌಲಿಂಗ್ ದಾಳಿ ಮಾಡುವ ಮೂಲಕ ಕ್ರಿಕೆಟ್ ದಿಗ್ಗಜರ ಗಮನಸೆಳೆದರು. ಈ ಬಗ್ಗೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದಾರೆ.

"ಈ ಬಾರಿಯ ಲೀಗ್​ನಲ್ಲಿಯೂ ರಾಜಸ್ಥಾನ ರಾಯಲ್ಸ್​ ಪರ ಉತ್ತಮ ಪ್ರದರ್ಶನ ನೀಡಿದ ಸಂದೀಪ್​ ಶರ್ಮಾ, ಹಲವು ಪಂದ್ಯಗಳನ್ನು ರಾಯಲ್ಸ್​ಗೆ ಗೆಲ್ಲಿಸಿಕೊಟ್ಟಿದ್ದಾರೆ. ರೋಚಕ ಗೆಲುವುಗಳಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸಂದೀಪ್​ಗೆ ಪ್ಲೇಯರ್ ಆಫ್​ ದಿ ಮ್ಯಾಚ್​ ಪ್ರಶಸ್ತಿ ಕೂಡ ಸಿಕ್ಕಿದೆ. ಆದ್ರೆ, ಅದೃಷ್ಟವಿಲ್ಲದ ಸಂದೀಪ್​ಗೆ ಟೀಂ ಇಂಡಿಯಾದ ಆಯ್ಕೆಗಾರರು ಹೆಚ್ಚಿನ ಅವಕಾಶಗಳನ್ನು ಕೊಡಲಿಲ್ಲ" ಎಂದು ನವಜೋತ್ ಸಿಂಗು ಸಿಧು ಹೇಳಿದ್ದಾರೆ.

"ಕ್ವಾಲಿಫೈರ್​ 2 ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ ಅವರಿಗೆ ಪರ್ಫೆಕ್ಟ್​ ಯಾರ್ಕರ್ ಹಾಕಿ, ವಿಕೆಟ್​ ಪಡೆದ ಸಂದೀಪ್​, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಖರ್​ ಯೂನಿಸ್​ ಮತ್ತು ವಾಸಿಮ್ ಅಕ್ರಮ್​ ಅವರ ಬೌಲಿಂಗ್ ದಾಳಿಯನ್ನು ನೆನಪಿಸುತ್ತಾರೆ. ಈ ದಿಗ್ಗಜ ಬೌಲರ್​ಗಳಂತೆಯೇ ಸಂದೀಪ್ ಶರ್ಮಾ ಕೂಡ ಬೌಲ್ ಮಾಡುವುದು ನಿಜಕ್ಕೂ ಮೆಚ್ಚುವಂತದ್ದು. ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ಚಾಂಪಿಯನ್ಸ್​ಗಳನ್ನೇ ಪರದಾಡುವಂತೆ ಮಾಡಿದರು" ಎಂದರು.

"ಸಂದೀಪ್ ಮತ್ತು ಅಕ್ರಮ್ ಬೌಲಿಂಗ್ ದಾಳಿಯಲ್ಲಿ ಸಾಮ್ಯತೆ ಇದೆ. ಶರ್ಮಾರ ಬೌಲಿಂಗ್​ನಲ್ಲಿ ಬಹಳಷ್ಟು ವೇರಿಯೇಷನ್​ಗಳಿವೆ. ಅಂದಿನ ಸಮಯದಲ್ಲಿ ವಾಸಿಮ್​ ಅವರ ಆಕ್ರಮಣಕಾರಿ ಬೌಲಿಂಗ್​ ಎದುರಾಳಿಗಳಲ್ಲಿ ಬಹಳ ಚಿಂತಿಸುವಂತೆ ಮಾಡುತ್ತಿತ್ತು. ಇದೀಗ ಅದೇ ರೀತಿ ಸಂದೀಪ್ ಕೂಡ ಮಾಡುತ್ತಿದ್ದಾರೆ" ಎಂದು ಸಿಧು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).