ಅಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ 08 ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ್ದು, ಸೆಮಿಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಇನ್ನೂ ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ ಒಂದನ್ನು ಮಾಡಿದ್ದು, ವಿಶೇಷ ಸಾಧನೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ (50 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (37 ರನ್, 28 ಎಸೆತ, 1 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 146 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 50 ರನ್‌ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.
ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 37 ರನ್ ಸಿಡಿಸುವ ಮೂಲಕ ಟಿ20 ಮತ್ತು ಏಕದಿನ ವಿಶ್ವಕಪ್‌ನಲ್ಲಿ 3000 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ದಾಖಲೆಯನ್ನು ಮುಟ್ಟಲು ಕೊಹ್ಲಿಗೆ 35 ರನ್‌ಗಳ ಅಗತ್ಯವಿತ್ತು. ಇಂದಿನ ಪಂದ್ಯದಲ್ಲಿ 37 ರನ್ ಬಾರಿಸಿದ ತಕ್ಷಣ ಕೊಹ್ಲಿ ಇತಿಹಾಸ ನಿರ್ಮಿಸಿದರು.
ಇದನ್ನೂ ಓದಿ: ಆ ಒಂದು ಪಂದ್ಯವನ್ನು ನೆನೆಸಿಕೊಂಡರೆ ಈಗಲೂ ನನ್ನ ಮೈ ನಡುಗುತ್ತೆ; ರಶೀದ್ ಖಾನ್ರನ್ನು ಭಯಬೀಳಿಸಿದ ಆ ದೇಶ ಯಾವುದು ಗೊತ್ತಾ?
ಐಸಿಸಿ ನಡೆಸುವ ಸೀಮಿತ ಓವರ್ಗಳ ವಿಶ್ವಕಪ್ ಸರಣಿಯಲ್ಲಿ 3000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ವಿರಾಟ್ ನಂತರ ರೋಹಿತ್ ಶರ್ಮಾ (2637 ರನ್) ನಂತರದ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (2502 ರನ್) ಬಾರಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದು, ಟೀಮ್ ಇಂಡಿಯಾದ ಲೆಜಂಡರಿ ಆಟಗಾರ ಸಚಿನ್ ತೆಂಡೂಲ್ಕರ್ (2278 ರನ್) ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸ ಂಗಕ್ಕರ (2193) ಐದನೇ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ-20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೂ 32 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 14 ಅರ್ಧಶತಕ ಒಳಗೊಂಡಂತೆ 1207 ರನ್ ಗಳಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 37 ಪಂದ್ಯಗಳನ್ನು ಆಡಿರುವ ವಿರಾಟ್ ಐದು ಶತಕ, 12 ಅರ್ಧಶತಕ ಒಳಗೊಂಡಂತೆ 1795 ರನ್ ಗಳಿಸಿದ್ದಾರೆ.