ಕ್ರೀಡೆ

ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!

ಇಸ್ಲಮಾಬಾದ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಅಫ್ರಿದಿ ಮಗಳು ಅನ್ಸಾ ಅಫ್ರಿದಿಗೆ ಶಾದಿ ಭಾಗ್ಯ ಕೂಡಿ ಬಂದಿದ್ದು, ಪ್ರಸ್ತುತ ಪಾಕ್​ ತಂಡದ ವೇಗದ ಬೌಲರ್​ ಶಾಹೀನ್​ ಷಾ ಅಫ್ರಿದಿಯನ್ನು ಅನ್ಸಾ ವರಿಸಲಿದ್ದಾರೆ. ಸದ್ಯದಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಅಫ್ರಿದಿ ಕುಟುಂಬ ಖಚಿತಪಡಿಸಿವೆ.

ಭಾನುವಾರ ಟ್ವೀಟ್​ ಮಾಡಿರುವ ಶಾಹೀದ್​ ಅಫ್ರಿದಿ, ನನ್ನ ಮಗಳಿಗಾಗಿ ಶಾಹೀನ್​ ಕುಟುಂಬ ನಮ್ಮನ್ನು ಸಂಪರ್ಕಿಸಿದೆ. ಸದ್ಯ ಇಬ್ಬರ ಮದುವೆಗೆ ಎರಡು ಕುಟುಂಬದ ಸಮ್ಮತಿ ಇದೆ. ಪಂದ್ಯಗಳನ್ನು ಸ್ವರ್ಗದಲ್ಲಿ ಮಾಡುವಂತೆ, ಈ ಪಂದ್ಯವನ್ನು (ಮದುವೆ) ಸಹ ದೇವರು ಸಿದ್ಧಪಡಿಸಿದ್ದಾನೆ. ಮೈದಾನ ಮತ್ತು ಅದರಿಂದಾಚೆಗೆ ಶಾಹೀನ್​ ಒಳ್ಳೆಯ ಯಶಸ್ಸು ಸಿಗಲೆಂದು ನಾನು ಪಾರ್ಥಿಸುತ್ತೇನೆ. ಆದಷ್ಟು ಬೇಗ ನಿಶ್ಚಿತಾರ್ಥ ನೆರವೇರಿಸಲಾಗುವುದು ಎಂದು ಅಫ್ರಿದಿ ತಿಳಿಸಿದ್ದಾರೆ.

ಅಫ್ರಿದಿ ಮನೆಗೆ ಮದುವೆ ಪ್ರಸ್ತಾವನೆ ಕಳುಹಿಸಿದ್ದಾಗಿ ಮತ್ತು ಅದನ್ನು ಅಫ್ರಿದಿ ಕುಟುಂಬ ಒಪ್ಪಿರುವ ವಿಚಾರವನ್ನು ಶಾಹೀನ್​ ತಂದೆ ಅಯಾಜ್​ ಖಾನ್​ ಸಹ ಖಚಿತಪಡಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ಎರಡು ಕುಟುಂಬ ಮದುವೆ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಇದೀಗ ಇಬ್ಬರ ನಡುವೆ ಮಾತುಕತೆ ನಡೆದಿರುವುದು ಸಂತಸದ ವಿಚಾರ. ಆದಷ್ಟು ಬೇಗ ದಿನಾಂಕ ನಿಗದಿಯಾಗುವ ಭರವಸೆ ಇದೆ ಎಂದು ಅಯಾಜ್​ ಖಾನ್​ ಹೇಳಿದ್ದಾರೆ.

ಅಫ್ರಿದಿ ಟ್ವೀಟ್​ಗ ಪ್ರತಿಕ್ರಿಯೆ ನೀಡಿರುವ ಶಾಹೀನ್​, ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು. ನೀವು ನಮ್ಮ ರಾಷ್ಟ್ರದ ಹೆಮ್ಮೆ ಎಂದಿದ್ದಾರೆ.

ಇನ್ನು ಅಫ್ರಿದಿ ಮತ್ತು ಶಾಹೀನ್​ ಇಬ್ಬರು ಪಾಕಿಸ್ತಾನ ಸೂಪರ್​ ಲೀಗ್​ ಪಂದ್ಯದಲ್ಲಿ ಆಡಿದ್ದಾರೆ. (ಏಜೆನ್ಸೀಸ್​)