ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮೆಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ (Virat Kohli) ಅವರ ರನ್ ಬರ ಮುಂದುವರೆದಿದ್ದು, ಇದಕ್ಕೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಗಿತ್ತು. ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ನಿಂದ ಒಟ್ಟು 23 ರನ್ ಸಿಡಿಸಿ ತೀವ್ರ ಟೀಕೆಗೆ ಗುರಿಯಾಗಿರುವ ವಿರಾಟ್ ಅವರ ಬೆಂಬಲಕ್ಕೆ ಇದೀಗ ಟೀಮ್ ಇಂಡಿಯಾದ(Team India) ಮಾಜಿ ಆಟಗಾರ ಪಾರ್ಥೀವ್ ಪಟೇಲ್ ನಿಂತಿದ್ದು, ವಿರಾಟ್ ರನ್ ಬರ ಎದುರಿಸಲು ಕಾರಣವನ್ನು ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪಾರ್ಥೀವ್, ವಿರಾಟ್ ತನಗಾಗಿ ಸೆಟ್ ಮಾಡಿಕೊಂಡಿರುವ ಸ್ಟಾಂಡರ್ಡ್ನಿಂದಾಗಿ ಒತ್ತಡವನ್ನು ಎದುರಿಸುತ್ತಿದ್ದಾನೆ. ನನ್ನ ಪ್ರಕಾರ ಜೋ ರೂಟ್, ಕೇನ್ ವಿಲಿಯಮ್ಸನ್ ಅಥವಾ ಸ್ಟೀವ್ ಸ್ಮಿತ್ ಕೂಡ ಈ ರೀತಿಯ ಒತ್ತಡವನ್ನು ಎದುರಿಸುತ್ತಿರುತ್ತಾರೆ ಎಂಬುದು ನನ್ನ ಅನಿಸಿಕೆ. ಆತನ ಮೇಲೆ ನಿರೀಕ್ಷೆಯ ಒತ್ತಡ ಹೆಚ್ಚಿದ್ದು, 60 ಅಥವಾ 70 ರನ್ ಗಳಿಸಿದರೂ ಅದು ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ.
ಏಕೆಂದರೆ ಆತ ಪ್ರತಿಬಾರಿ ಮೈದಾನಕ್ಕೆ ಇಳಿದಾಗ ನಾವು ಶತಕವನ್ನು ನಿರೀಕ್ಷಿಸುತ್ತೇವೆ. ಆತ ಪ್ರತಿಬಾರಿಯೂ ತೀವ್ರತೆಯೊಂದಿಗೆ ಆಡಬೇಕೆಂದು ನಾವು ನಿರೀಕ್ಷಿಸುತ್ತೇವೆ. ನನ್ನ ಪ್ರಕಾರ ಅನುಭವಿಸಬೇಕಾದ ಒತ್ತಡದ ಪ್ರಕಾರವನ್ನು ಯೋಚಿಸಬಹುದು ಎಂದು ನಾನು ಭಾವಿಸುವುದಿಲ್ಲ. ಈ ಬಗ್ಗೆ ಆತ ಗಮನಹರಿಸುವುದು ಸೂಕ್ತ ಎಂದು ಪಾರ್ಥೀವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಈವರೆಗೆ 114 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ 193 ಇನ್ನಿಂಗ್ಸ್‌ಗಳಲ್ಲಿ 48.74 ಸರಾಸರಿಯಲ್ಲಿ 29 ಶತಕ ಮತ್ತು 30 ಅರ್ಧಶತಕಗಳೊಂದಿಗೆ 8,871 ರನ್ ಗಳಿಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ರನ್ ಬರವನ್ನು ನೀಗಿಸುತ್ತಾರೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ಇದ್ದಾರೆ.