ಕ್ರೀಡೆ

ಜನವರಿ 21ರೊಳಗೆ ರಿಟೇನ್‌ಗೆ ಗಡುವು, ಫೆಬ್ರವರಿ 11ರಂದು ಐಪಿಎಲ್ ಆಟಗಾರರ ಹರಾಜು?

ನವದೆಹಲಿ: ಮುಂಬರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ಫೆಬ್ರವರಿ 11ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಆದರೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಎಲ್ಲ 8 ತಂಡಗಳಿಗೆ ಆಟಗಾರರ ರಿಟೇನ್ ಪಟ್ಟಿಯನ್ನು ಜನವರಿ 21ರೊಳಗೆ ಸಲ್ಲಿಸಲು ಗಡುವು ನೀಡಲಾಗಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಗುರುವಾರ ತಿಳಿಸಿದ್ದಾರೆ.

ವರ್ಚುವಲ್ ಮೂಲಕ ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಫ್ರಾಂಚೈಸಿಗಳು ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳಲು ಫೆಬ್ರವರಿ 4ರವರೆಗೆ ಕಾಲಾವಕಾಶ ನೀಡಲಾಗಿದೆ. 2021ರ ಐಪಿಎಲ್ ಟೂರ್ನಿಯನ್ನು ಎಲ್ಲಿ ಮತ್ತು ಯಾವಾಗ ನಡೆಸುವುದೆಂದು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಕನ್ನಡಿಗ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಆಟಗಾರರ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಎಂಬುದು ಕೂಡ ಇನ್ನೂ ನಿರ್ಧಾರವಾಗಿಲ್ಲ. ಫೆಬ್ರವರಿಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಮೊದಲ ಮತ್ತು 2ನೇ ಪಂದ್ಯದ ನಡುವೆ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಮೊದಲ ಟೆಸ್ಟ್ ಚೆನ್ನೈನಲ್ಲಿ ಫೆಬ್ರವರಿ 5ರಿಂದ 9ರವರೆಗೆ ನಡೆದರೆ, 2ನೇ ಟೆಸ್ಟ್ ಫೆಬ್ರವರಿ 13ರಿಂದ 17ವರೆಗೆ ನಡೆಯಲಿದೆ.

ಈ ಬಾರಿ ಐಪಿಎಲ್ ಆಯೋಜಿಸಲು ಭಾರತವೇ ಮೊದಲ ಆದ್ಯತೆಯಾಗಿದ್ದರೂ, ಕರೊನಾ ಹಾವಳಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರದ ಕಾರಣ ಈ ಸಲವೂ ಯುಎಇಯಲ್ಲೇ ಟೂರ್ನಿ ನಡೆಸುವ ಆಯ್ಕೆಯನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಅಲ್ಲದೆ, ಭಾರತದಲ್ಲಿಯೇ ಟೂರ್ನಿ ಆಯೋಜಿಸುವುದಾದರೂ, ಎಲ್ಲ ತಂಡಗಳು ತವರು-ಎದುರಾಳಿ ನೆಲದಲ್ಲಿ ಆಡಲಿವೆಯೇ ಮತ್ತು 8 ತಂಡಗಳ ತವರಿನಲ್ಲಿಯೂ ಪಂದ್ಯಗಳು ನಡೆಯಲಿವೆಯೇ ಎಂಬ ಗೊಂದಲವಿದೆ. ಭಾರತದಲ್ಲಿ ಟೂರ್ನಿ ನಡೆಸುವುದೇ, ಬೇಡವೇ ಎಂದು ನಿರ್ಧರಿಸಲು ಬಿಸಿಸಿಐ ಇನ್ನೂ ಒಂದು ತಿಂಗಳ ಕಾಲ ಕಾದುನೋಡಲಿದೆ ಎನ್ನಲಾಗಿದೆ.

ತಂಡಗಳ ಬಜೆಟ್ ಮಿತಿ ಬದಲಿಲ್ಲ
ಕಳೆದ ಹರಾಜಿನ ವೇಳೆ ಬಿಸಿಸಿಐ, ಪ್ರತಿ ತಂಡಕ್ಕೆ ಆಟಗಾರರ ಖರೀದಿಗೆ ಗರಿಷ್ಠ 85 ಕೋಟಿ ರೂ. ಬಜೆಟ್ ನಿಗದಿಪಡಿಸಿತ್ತು. ಈ ವರ್ಷವೂ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಕಳೆದ ಬಾರಿ ಆಟಗಾರರ ಖರೀದಿಯ ಬಳಿಕ ಚೆನ್ನೈ ಸೂಪರ್‌ಕಿಂಗ್ಸ್ ಕನಿಷ್ಠ 15 ಲಕ್ಷ ರೂ. ಬಜೆಟ್ ಬಾಕಿ ಉಳಿಸಿಕೊಂಡಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಗರಿಷ್ಠ 16.5 ಕೋಟಿ ರೂ. ಉಳಿಸಿಕೊಂಡಿತ್ತು.