ನವದೆಹಲಿ: ಮನು ಭಾಕರ್ ( Manu Bhaker ) ಅವರು ಇತ್ತೀಚೆಗಷ್ಟೇ ಮುಗಿದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ( Medals ) ಗಳನ್ನು ಗೆದ್ದುಕೊಟ್ಟ ಶೂಟರ್. ಈ ತಾರೆಯ ಯಶಸ್ಸನ್ನು ದೇಶವೇ ಸಂಭ್ರಮಿಸಿತು. ಮನುವಿಗೆ ಇಡೀ ದೇಶವೇ ಅದ್ಧೂರಿ ಸ್ವಾಗತ ನೀಡಿತು. ಇದಾದ ನಂತರ ಮನು ಭಾಕರ್ ತಾವು ಭಾಗವಹಿಸುವ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪದಕಗಳನ್ನು ಒಯ್ಯುತ್ತಿದ್ದಾರೆ.
ಹೋದಲ್ಲೆಲ್ಲ ಮನು ಭಾಕರ್ ( Manu Bhaker ) ಪದಕಗಳನ್ನು ಒಯ್ಯುತ್ತಿರುವುದೇಕೆ ಕೆಲ ನೆಟ್ಟಿಗರು ಮನು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಪ್ರತಿ ಕಾರ್ಯಕ್ರಮಕ್ಕೂ ಎರಡು ಪದಕಗಳೊಂದಿಗೆ ಏಕೆ ಬರುತ್ತೀರಿ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಮನು ಭಾಕರ್ ನೀಡಿರುವ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಚಪ್ಪಾಳೆ ತಟ್ಟುತ್ತಿದ್ದಾರೆ.
ನಾನು ಪಡೆದ ಪದಕಗಳನ್ನು ನಾನು ತರಬಾರದು ಎಂದು ಹೇಳುವುದರ ಹಿಂದಿನ ಅರ್ಥವೇನು. ಕಾರ್ಯಕ್ರಮದ ಸಂಘಟಕರು ಪದಕಗಳನ್ನು ತರಲು ಆಗಾಗ್ಗೆ ನನ್ನಲ್ಲಿ ವಿನಂತಿಸುತ್ತಾರೆ. ಅವರ ಕೋರಿಕೆಯಂತೆ ನಾನು ಪದಕಗಳನ್ನು ತಂದಾಗ ಮತ್ತು ಎಲ್ಲರೂ ಫೋಟೋಗಳನ್ನು ತೆಗೆದುಕೊಳ್ಳಲು ಬಯಸಿದಾಗ ಅದರಲ್ಲಿ ತಪ್ಪೇನಿದೆ? ಎಂದು ಮನು ಭಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕೆಲವೊಮ್ಮೆ ತನ್ನ ವಿರುದ್ಧ ಹರಡುತ್ತಿರುವ ವದಂತಿಗಳಿಂದ ಅಸಮಾಧಾನ ಮತ್ತು ಕೋಪವನ್ನು ಅನುಭವಿಸುತ್ತೇನೆ. ಆದರೆ, ತನ್ನ ಕೋಪವನ್ನು ಹೇಗೆ ನಿರ್ವಹಿಸಬೇಕೆಂದು ಕಲಿತಿದ್ದೇನೆ ಎಂದು ಮನು ಭಾಕರ್ ಹೇಳಿದರು. ಅಲ್ಲದೆ, ಕೋಪವು ಯಾವುದನ್ನೂ ಪರಿಹರಿಸುವುದಿಲ್ಲ. ಎಲ್ಲವನ್ನೂ ಧನಾತ್ಮಕವಾಗಿ ನೋಡಲು ಕಲಿಯಿರಿ. ಶೂಟಿಂಗ್ ಮೇಲಿನ ನನ್ನ ಪ್ರೀತಿಗೆ ಅಂತ್ಯವಿಲ್ಲ. ದೇಶಕ್ಕಾಗಿ ಸ್ಪರ್ಧಿಸಿ ಪದಕ ಗೆಲ್ಲಬೇಕು ಎಂಬುದೇ ನನ್ನ ಆಸೆ ಎಂದರು.
ಇನ್ನು ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ. ಪ್ಯಾರಿಸ್ ಒಲಿಂಪಿಕ್ಸ್-2024 ಮಹಿಳೆಯರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಮತ್ತು ಮಿಶ್ರ 10 ಮೀಟರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ದಾಖಲೆಯನ್ನು ನಿರ್ಮಿಸಿದರು. 25 ಮೀಟರ್ಸ್ ವಿಭಾಗದಲ್ಲಿ ಮೂರನೇ ಪದಕ ಸ್ವಲ್ಪದರಲ್ಲೇ ಕೈ ತಪ್ಪಿತು. (ಏಜೆನ್ಸೀಸ್)