

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್-2024 ರ ವಿಶ್ವ ಕ್ರೀಡಾಕೂಟದಲ್ಲಿ ಮನು ಭಾಕರ್ ಎರಡು ಕಂಚಿನ ಪದಕ ಗೆದ್ದು ದಾಖಲೆ ಸೃಷ್ಟಿಸಿದ ನಂತರ ಆಕೆಯ ಹೆಸರು ಪ್ರಸಿದ್ಧವಾಗುತ್ತಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಮತ್ತು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರೊಂದಿಗೆ ಇರುವ ವೀಡಿಯೊ ವೈರಲ್ ಆಗುತ್ತಿದ್ದಂತೆ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು.
ನೀರಜ್ ಚೋಪ್ರಾ ಅಲ್ಲದೇ ಭಾರತದ ಇತರೆ ಅಥ್ಲೀಟ್ಗಳನ್ನು ಮನು ಭಾಕರ್ ತಾಯಿ ಭೇಟಿಯಾಗಿ ಮಾತನಾಡಿದ್ದರು. ಆದ್ರೆ ನೀರಜ್ ಚೋಪ್ರಾ ಜೊತೆಗಿನ ಸಂಭಾಷಣೆಯ ವಿಡಿಯೋ ಕ್ಲಿಪ್ ಮಾತ್ರ ವೈರಲ್ ಆಗುತ್ತಿದೆ. ಮನು ಭಾಕರ್ ತಂದೆ, ವದಂತಿಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮನು ಇನ್ನು ತುಂಬಾ ಚಿಕ್ಕವಳು, ಇದು ಮದುವೆಯಾಗುವ ವಯಸ್ಸು ಅಲ್ಲ ಎಂದು ಊಹಾಪೋಹಗಳನ್ನು ಅಲ್ಲಗಳೆದಿದ್ದಾರೆ.
ಮನು ಮತ್ತು ನೀರಜ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ . ಶೀಘ್ರದಲ್ಲೇ ಅವರ ಮದುವೆ ನಡೆಯಲಿದೆ. ಆದರೆ ಮನು ಭಾಕರ್ ಕುಟುಂಬ ಇದನ್ನು ನಿರಾಕರಿಸಿದೆ. ಈ ವದಂತಿಗಳಿಗೆ ಮನು ನೇರ ಸ್ಪಷ್ಟನೆ ನೀಡಿದ್ದಾರೆ.
'ಆ ವದಂತಿಗಳ ಕುರಿತಾಗಿ ನನಗೆ ತಿಳಿಯಿತ್ತು. ಇವುಗಳ ಬಗ್ಗೆ ನಾನು ಪ್ರತಿಕ್ರಿಯಿಸುತ್ತೇನೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನೀರಜ್ ಚೋಪ್ರಾ ಜೊತೆ ಮಾತನಾಡಿದ್ದು ನಿಜ. ಆದರೆ ಅದನ್ನು ಯಾರೋ ವಿಡಿಯೋ ಮಾಡಿದ್ದಾರೆ. ನಮ್ಮಿಬ್ಬರ ನಡುವೆ ಹೆಚ್ಚು ಸಂವಾದವಿಲ್ಲ. ನಾವು ಪಂದ್ಯಾವಳಿಗಳು ಮತ್ತು ಈವೆಂಟ್ಗಳಲ್ಲಿ ಭೇಟಿಯಾದಾಗ, ನಾವು ಪರಸ್ಪರ ಸ್ವಾಗತಿಸುತ್ತೇವೆ. ನಾವು ಪ್ರೀತಿಸುತ್ತಿದ್ದೇವೆ ಎಂಬ ಎಲ್ಲಾ ಸುದ್ದಿಗಳು ಸುಳ್ಳು ಎಂದು ಮನು ಸ್ಪಷ್ಟಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಮನು , ಮತ್ತೊಬ್ಬ ಶೂಟರ್ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದರು.