ಸರ್​​ ನನಗೆ 2 ಕೈಗಳು ಮಾತ್ರ ಇರೋದು! ವಿರಾಟ್​ ಕೊಹ್ಲಿ ಮಾತಿನಿಂದ ಬೇಸರಗೊಂಡ ನೆಟ್ಟಿಗರು | Virat Kohli

Virat Kohli
Published on

ನವದೆಹಲಿ: ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಭಾರತ (Team India) ಖುಷಿಯ ಅಲೆಯಲ್ಲಿ ತೇಲುತ್ತಿದೆ. ಅದೇ ಖುಷಿಯಲ್ಲಿ ಎರಡನೇ ಟೆಸ್ಟ್​ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿರುವ ಟೀಮ್​ ಇಂಡಿಯಾ ಇಂದು ಕಾನ್ಪುರಕ್ಕೆ ಆಗಮಿಸಿದೆ. ಸೆ.27ರಿಂದ ಎರಡನೇ ಟೆಸ್ಟ್​ ಆರಂಭವಾಗಲಿದೆ.

ತಾಜಾ ಸಂಗತಿ ಏನೆಂದರೆ, ವಿರಾಟ್​ ಕೊಹ್ಲಿ ( Virat Kohli ) ಸೇರಿದಂತೆ ಟೀಮ್​ ಇಂಡಿಯಾದ ಆಟಗಾರರು ಇಂದು ಕಾನ್ಪುರಕ್ಕೆ ಬಂದಿಳಿಯಿತು. ಕ್ರಿಕೆಟ್​ ತಾರೆಯರನ್ನು ನೋಡಲು ಹೊಟೇಲ್‌ನಲ್ಲಿ ಅಪಾರ ಜನಸ್ತೋಮವೇ ನೆರೆದಿತ್ತು. ಇವರಲ್ಲಿ ಹೋಟೆಲ್ ಸಿಬ್ಬಂದಿಯೂ ಸೇರಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೋಟೆಲ್ ಸಿಬ್ಬಂದಿ ಹೂಗುಚ್ಛದೊಂದಿಗೆ ಕ್ರಿಕೆಟಿಗರನ್ನು ಸ್ವಾಗತಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಅವರ ಒಂದು ಕೈಯಲ್ಲಿ ಬ್ಯಾಗ್ ಇತ್ತು. ಹೂಗುಚ್ಛವನ್ನು ಒಂದು ಕೈನಲ್ಲಿ ಕೊಹ್ಲಿ ಸ್ವೀಕರಿಸಿದರು. ಇದೇ ವೇಳೆ ಇನ್ನೊಬ್ಬರು ಕೊಹ್ಲಿಯ ಕೈ ಕುಲುಕಲು ಪ್ರಯತ್ನಿಸಿದರು. ಇದರಿಂದ ಅಸಮಾಧಾನಗೊಂಡ ಕೊಹ್ಲಿ, "ಸರ್ ನನಗೆ ಇರುವುದು ಎರಡು ಕೈಗಳು" ಎಂದು ಉತ್ತರಿಸಿ, ಹೂಗುಚ್ಛವನ್ನು ಸಹಾಯಕ ಕೈಗೆ ನೀಡಿ ಅಲ್ಲಿಂದ ಹೊರನಡೆದರು.

ಇದೇ ವಿಡಿಯೋದಲ್ಲಿ ವಿರಾಟ್​ ಕೊಹ್ಲಿ ( Virat Kohli  ) ನಂತರ ಬಂದ ಕ್ರಿಕೆಟಿಗರು ಹೋಟೆಲ್ ಸಿಬ್ಬಂದಿಯಿಂದ ಹೂಗುಚ್ಛ ಮತ್ತು ಹಸ್ತಲಾಘವಗಳನ್ನು ಸ್ವೀಕರಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೆಲವರು ಕೊಹ್ಲಿ ನಡೆಯನ್ನು ಟೀಕಿಸಿದರೆ, ಇನ್ನು ಕೆಲವರು ಕೊಹ್ಲಿ ಪರ ಬ್ಯಾಟ್​ ಬೀಸುತ್ತಿದ್ದಾರೆ.

ಬಾಂಗ್ಲಾ ಕ್ರಿಕೆಟ್​ ತಂಡಕ್ಕೆ ಪ್ರತಿಭಟನೆ ಬಿಸಿ

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಪ್ರವಾಸಿ ತಂಡದ ವಿರುದ್ಧ ಕಾನ್ಪುರದಲ್ಲಿ ಪ್ರತಿಭಟನೆ ನಡೆಯುವ ಭೀತಿ ಎದುರಾಗಿದೆ. ಬಾಂಗ್ಲಾ ವಿರುದ್ಧ ಕ್ರಿಕೆಟ್​ ಸರಣಿ ಆಡಬಾರದು ಎಂದು ಕಾನ್ಪುರದ ಹಿಂದು ಸಂಘಟನೆಗಳು ಬೆದರಿಕೆಯನ್ನೂ ಹಾಕಿದ್ದವು. ಇದರಿಂದಾಗಿ ಬಿಸಿಸಿಐ, ಪಂದ್ಯವನ್ನು ಲಖನೌಗೆ ಸ್ಥಳಾಂತರಿಸುವ ಬಗ್ಗೆಯೂ ಹಿಂದೊಮ್ಮೆ ಚಿಂತನೆ ನಡೆಸಿತ್ತು. ಅಂತಿಮವಾಗಿ ಉತ್ತರ ಪ್ರದೇಶ ಕ್ರಿಕೆಟ್​ ಸಂಸ್ಥೆ ಪಂದ್ಯವನ್ನು ಕಾನ್ಪುರದಲ್ಲೇ ನಡೆಸಲು ನಿರ್ಧರಿಸಿತ್ತು. ಹೀಗಾಗಿ ಪ್ರವಾಸಿ ಬಾಂಗ್ಲಾ ತಂಡಕ್ಕೆ ಕಾನ್ಪುರದಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಪಂದ್ಯದ ಸಮಯದಲ್ಲೂ ಪ್ರತಿಭಟನೆಗಳಾಗದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾನ್ಪುರದ ಹೆಚ್ಚುವರಿ ಪೊಲೀಸ್​ ಆಯುಕ್ತ ಹರೀಶ್​ ಚಂದರ್​ ತಿಳಿಸಿದ್ದಾರೆ. ಈ ನಡುವೆ ಅಖಿಲೇಶ್​ ಭಾರತೀಯ ಹಿಂದು ಮಹಾಸಭಾ ಬಾಂಗ್ಲಾ ವಿರುದ್ಧದ ಕಾನ್ಪುರ ಟೆಸ್ಟ್​ ಮತ್ತು ಗ್ವಾಲಿಯರ್​ ಟಿ20 ಪಂದ್ಯಕ್ಕೆ ಅಡ್ಡಿಪಡಿಸುವ ಬೆದರಿಕೆ ಒಡ್ಡಿದೆ. ಜತೆಗೆ ಗ್ರೀನ್​ಪಾರ್ಕ್​ ಸ್ಟೇಡಿಯಂ ಸಮೀಪದ ರಸ್ತೆಯಲ್ಲಿ ಹವನ ನಡೆಸಿ ಅಡಚಣೆಗೆ ಯತ್ನಿಸಿದೆ. ಇದರಿಂದ ಯುಪಿ ಪೊಲೀಸರು, 20 ಜನರ ವಿರುದ್ಧ ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.

ಮಳೆ ಅಡಚಣೆ ಭೀತಿ

ಶುಕ್ರವಾರದಿಂದ ಕಾನ್ಪುರದ ಗ್ರೀನ್​ಪಾರ್ಕ್​ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ಗೆ ಮಳೆ ಅಡಚಣೆಯ ಭೀತಿ ಎದುರಾಗಿದೆ. ಪಂದ್ಯ ಒಟ್ಟು 5 ದಿನಗಳ ಪೈಕಿ ಮೊದಲ 4 ದಿನಗಳಲ್ಲಿ ಮಳೆ ಅಡಚಣೆ ತರುವ ಸಾಧ್ಯತೆ ಹೆಚ್ಚಿದೆ. ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ಇತ್ತೀಚೆಗೆ ಅಫ್ಘಾನಿಸ್ತಾನ-ನ್ಯೂಜಿಲೆಂಡ್​ ನಡುವೆ ನಿಗದಿಯಾಗಿದ್ದ ಏಕೈಕ ಟೆಸ್ಟ್​ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಅಲ್ಲಿಂದ 477 ಕಿಲೋಮೀಟರ್​ ದೂರದಲ್ಲಿರುವ ಕಾನ್ಪುರದಲ್ಲಿ ಈಗ ಭಾರತ&ಬಾಂಗ್ಲಾ ಟೆಸ್ಟ್​ ನಿಗದಿಯಾಗಿದೆ. ಈ ಪಂದ್ಯದಲ್ಲಿ ಮಳೆಯಿಂದಾಗಿ ಸ್ಪಷ್ಟ ಲಿತಾಂಶ ಬಾರದಿದ್ದರೂ ಸರಣಿಯಂತೂ ಭಾರತಕ್ಕೆ ಒಲಿಯಲಿದೆ. ಆದರೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಸತತ 3ನೇ ಬಾರಿ ಫೈನಲ್​ಗೇರುವ ಭಾರತದ ಆಸೆಗೆ ಸ್ವಲ್ಪ ಹಿನ್ನಡೆಯೂ ಎದುರಾಗಲಿದೆ. ಹವಾಮಾನ ವರದಿಯ ಪ್ರಕಾರ, ಕಾನ್ಪುರ ಟೆಸ್ಟ್​ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆ ತರುವ ಸಾಧ್ಯತೆ ಶೇ.92ರಷ್ಟಿದೆ. ಅದರಲ್ಲೂ ಮೊದಲ ದಿನದ ಮೊದಲ 2 ಅವಧಿಗಳಲ್ಲಿ ಮಳೆ ಅಡಚಣೆಯ ಸಾಧ್ಯತೆ ಅಧಿಕವಾಗಿದೆ. 2, 3 ಮತ್ತು 4ನೇ ದಿನ ಮಳೆ ಕಾಡುವ ಸಾಧ್ಯತೆ ಶೇ. 49, 65, 56ರಷ್ಟಿದೆ. ಪಂದ್ಯದ ಕೊನೇ ದಿನದಾಟದಲ್ಲಿ ಮಾತ್ರ ಮಳೆ ಅಡಚಣೆ ಸಾಧ್ಯತೆ ಕೇವಲ ಶೇ.3ರಷ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net