ಸಿಡ್ನಿ: ಭಾರತ ತಂಡದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಕುಡುಕ ಪ್ರೇಕ್ಷಕನಿಂದ ಜನಾಂಗೀಯ ನಿಂದನೆ ಎದುರಿಸಿದ್ದಾರೆ. ಭಾರತ ತಂಡ ಈ ಸಂಬಂಧ ಐಸಿಸಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್‌ಗೆ ಶನಿವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.
ಎಸ್‌ಸಿಜಿ ಮೈದಾನದ ಸ್ಟಾೃಂಡ್‌ನಿಂದ ಕುಡುಕ ಪ್ರೇಕ್ಷಕ, ಸಿರಾಜ್ ಅವರನ್ನು ‘ಮಂಗ’ ಎಂದು ನಿಂದಿಸಿದ್ದಾನೆ. ಭಾರತದ ಒಟ್ಟಾರೆ ನಾಲ್ವರು ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ. ಈ ಘಟನೆ 2007-08ರ ಆಸೀಸ್ ಪ್ರವಾಸದ ಮಂಕಿಗೇಟ್ ಪ್ರಕರಣವನ್ನು ನೆನಪಿಸಿದೆ. ಆಗ ಸಿಡ್ನಿ ಟೆಸ್ಟ್‌ನಲ್ಲೇ ಆ್ಯಂಡ್ರ್ಯೋ ಸೈಮಂಡ್ಸ್‌ರನ್ನು ಹರ್ಭಜನ್ ಸಿಂಗ್ ‘ಮಂಕಿ’ ಎಂದು ನಿಂದಿಸಿದ್ದರು ಎಂಬ ಆರೋಪ ಎದುರಾಗಿತ್ತು. ಬಳಿಕ ಬಜ್ಜಿ ಆರೋಪಮುಕ್ತಗೊಂಡಿದ್ದರು.
ಆಸ್ಟ್ರೇಲಿಯಾದ 2ನೇ ಇನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಬುಮ್ರಾ, ಸಿರಾಜ್‌ಗೆ ನಿಂದನೆ ಎದುರಾಗಿದೆ. ಭಾರತ ತಂಡದ ದೂರಿನಿಂದ 3ನೇ ದಿನದಾಟದ ಬಳಿಕ ಅಂಪೈರ್‌ಗಳು ಮತ್ತು ಮೈದಾನದ ಭದ್ರತಾ ಸಿಬ್ಬಂದಿ, ಬುಮ್ರಾ-ಸಿರಾಜ್ ಅವರಲ್ಲದೆ ನಾಯಕ ಅಜಿಂಕ್ಯ ರಹಾನೆ ಜತೆಗೂ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಪಂದ್ಯಕ್ಕೆ ಪ್ರತಿದಿನ ಕೇವಲ 10 ಸಾವಿರ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.