ಕ್ರೀಡೆ

ಬಿಸಿಸಿಐ ಆಯ್ಕೆ ಸಮಿತಿಯಿಂದ ಶೀಘ್ರವೇ ಇಬ್ಬರು ಹೊರಗೆ! ಉಳಿದ ಸ್ಥಾನ ಭರ್ತಿಗೆ ಅರ್ಜಿ ಆಹ್ವಾನ​ | BCCI

ಮೋಹನ್​ ಶೆಟ್ಟಿ

BCCI: ಸೆ.9ರಿಂದ ದುಬೈನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ ಮೇಲೆ ವಿಶ್ವಾಸ ಇನ್ನಷ್ಟು ಗಟ್ಟಿಯಾದ ಬೆನ್ನಲ್ಲೇ ಅವರ ಅವಧಿಯನ್ನು 2026 ರವರೆಗೆ ಬಿಸಿಸಿಐ ವಿಸ್ತರಿಸಿದೆ. ಇದು ಅಗರ್ಕರ್​ಗೆ ಜಾಕ್​ಪಾಟ್​ ಆದರೆ, ಅದೇ ಆಯ್ಕೆ ಸಮಿತಿಯ ಇಬ್ಬರಿಗೆ ಶೀಘ್ರವೇ ಗೇಟ್​ಪಾಸ್ ಸಿಗಲಿದೆ ಎಂದು ವರದಿಯಾಗಿದೆ.

'ನ್ಯೂಸ್ 18' ವರದಿ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಹಿರಿಯ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಎರಡು ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚುವರಿಯಾಗಿ, ಮಂಡಳಿಯು ಮಹಿಳಾ ಮತ್ತು ಜೂನಿಯರ್ ಪುರುಷರ ಆಯ್ಕೆ ಸಮಿತಿಗಳಲ್ಲಿನ ಖಾಲಿ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಿರುವುದು ಗಮನಾರ್ಹ.

ಯಾವ ಹುದ್ದೆಗಳಿಗೆ ಸ್ಥಾನ?

ರಾಷ್ಟ್ರೀಯ ಆಯ್ಕೆಗಾರರು: ಪುರುಷರು (2 ಹುದ್ದೆ)

ಮಂಡಳಿ ಹಂಚಿಕೊಂಡಿರುವ ಪ್ರಕಟಣೆಯ ಪ್ರಕಾರ, ಹಿರಿಯ ಭಾರತೀಯ ಪುರುಷರ ಆಯ್ಕೆ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸದಸ್ಯರು ಟೆಸ್ಟ್, ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಫಾರ್ಮೆಟ್​ಗಳಿಗೆ ಬಿಸಿಸಿಐ ನಿರ್ದೇಶನದಂತೆ ಆಟಗಾರರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಅರ್ಹತೆ ಏನು?

ಕನಿಷ್ಠ 7 ಟೆಸ್ಟ್, 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅನುಭವ ಇರಬೇಕು. ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತರಾಗಿರಬೇಕು. ಮುಖ್ಯವಾಗಿ, ಬಿಸಿಸಿಐನ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿ 5 ವರ್ಷಗಳ ಕಾಲ ಇರಬಾರದು. ಪ್ರಸ್ತುತ, ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಈ ಸಮಿತಿಯ ನೇತೃತ್ವ ವಹಿಸಿದ್ದು, ಇದರಲ್ಲಿ ಶಿವ ಸುಂದರ್ ದಾಸ್, ಸುಬ್ರೋಟೊ ಬ್ಯಾನರ್ಜಿ, ಅಜಯ್ ರಾತ್ರ ಮತ್ತು ಶ್ರೀಧರನ್ ಶರತ್ ಸೇರಿದಂತೆ ಪ್ರಮುಖರು ಇದ್ದಾರೆ.

ರಾಷ್ಟ್ರೀಯ ಆಯ್ಕೆದಾರರು - ಮಹಿಳೆಯರು (4 ಸ್ಥಾನ)

ಮಹಿಳಾ ಆಯ್ಕೆ ಸಮಿತಿಯ ಸದಸ್ಯರು ವಿವಿಧ ಮಾದರಿಗಳು ಮತ್ತು ವಯೋಮಾನದ ಗ್ರೂಪ್​ಗಳಲ್ಲಿ ಟೀಮ್ ಇಂಡಿಯಾ (ಹಿರಿಯ ಮಹಿಳೆಯರು) ಆಯ್ಕೆ ಜವಾಬ್ದಾರಿಯನ್ನು ಹೊರಲಿದ್ದಾರೆ. ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಪರಿಶೀಲಿಸುವುದು, ಮೌಲ್ಯಮಾಪನ ವರದಿಗಳನ್ನು ಸಿದ್ಧಪಡಿಸುವುದು ಮತ್ತು ಬಲಿಷ್ಠ ಸ್ಕ್ವ್ಯಾಡ್​ ಅನ್ನು ಖಚಿತಪಡಿಸಿಕೊಳ್ಳುವುದು ಹುದ್ದೆಯ ಮುಖ್ಯ ಪಾತ್ರ.

ಅರ್ಹತೆ ಏನು?

ಭಾರತೀಯ ಮಹಿಳಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಮಾಜಿ ಆಟಗಾರ್ತಿ ಆಗಿರಬೇಕು. ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತಿ ಹೊಂದಿರಬೇಕು. 5 ವರ್ಷಗಳ ಕಾಲ ಬಿಸಿಸಿಐನ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರಬಾರದು. ಪ್ರಸ್ತುತ, ನೀತು ಡೇವಿಡ್ ನೇತೃತ್ವದ ಮಹಿಳಾ ಸಮಿತಿಯಲ್ಲಿ ಆರತಿ ವೈದ್ಯ, ರೇಣು ಮಾರ್ಗರೇಟ್, ವೆಂಕಟಚರ್ ಕಲ್ಪನಾ ಮತ್ತು ಶ್ಯಾಮಾ ಶಾ ಸೇರಿದಂತೆ ಪ್ರಮುಖರು ಇದ್ದಾರೆ.

ರಾಷ್ಟ್ರೀಯ ಆಯ್ಕೆಗಾರರು: ಜೂನಿಯರ್ ಪುರುಷರು (1 ಸ್ಥಾನ)

ಜೂನಿಯರ್ ಕ್ರಿಕೆಟ್ ಸಮಿತಿಯ ಸದಸ್ಯರು ಪ್ರ್ಯಾಕ್ಟಿಸ್​, ಪ್ರವಾಸಗಳು ಮತ್ತು ಟೂರ್ನಮೆಂಟ್​ ವಯೋಮಾನದ ತಂಡಗಳನ್ನು (22 ವರ್ಷದೊಳಗಿನವರವರೆಗೆ) ಆಯ್ಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜೂನಿಯರ್ ಪಂದ್ಯಗಳನ್ನು ಆಯೋಜಿಸುವುದು, ಕ್ಯಾಪ್ಟನ್​ ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಮತ್ತು ಯುವ ಆಟಗಾರರಲ್ಲಿ ನೈತಿಕ ಮೌಲ್ಯಗಳನ್ನು ಉತ್ತೇಜಿಸುವುದು ಈ ಹುದ್ದೆಯ ಪಾತ್ರವಾಗಿರಲಿದೆ,(ಏಜೆನ್ಸೀಸ್).