

ವಿಜಯಪುರ: ಸಾಂಪ್ರದಾಯಿಕ ಕುರಿಗಾಹಿಗಳ ಮೇಲಿನ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೂತನ ಕಾಯ್ದೆಯನ್ನು ಸ್ವಾಗತಿಸಿ ಸಾಂಪ್ರದಾಯಿಕ ಕುರಿಗಾಹಿಗಳ ಸಂಘದ ಪದಾಧಿಕಾರಿಗಳು ಶುಕ್ರವಾರ ಸಂಭ್ರಮಾಚರಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರದ ಪರ ಘೋಷಣೆ ಮೊಳಗಿಸಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ ಮಾತನಾಡಿ, ರಾಜ್ಯದಲ್ಲಿ ಶತಶತಮಾನಗಳಿಂದ ಕುರಿಗಾರರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ದಬ್ಬಾಳಿಕೆ ತಡೆಗಟ್ಟಲು ಕಾನೂನು ಜಾರಿಗಾಗಿ ನಾವು ಒತ್ತಾಯಿಸುತ್ತಾ ಬಂದಿದ್ದು ಈಗ ಈ ವಿನಯಕ್ಕೆ ವಿಧಾನಸಭೆ ಅಂಗೀಕಾರ ನೀಡಿರುವ ವಿಷಯ ತುಂಬಾ ಹರ್ಷ ತಂದಿದೆ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಕೇವಲ ಮೂರು ವರ್ಷದಲ್ಲಿ 300ರಷ್ಟು ಕುರಿಗಾಹಿಗಳ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುವುದು ಕುರಿಗಾರರ ಮೇಲಿನ ರಕ್ಷಣೆಯ ಕಾನೂನಿನ ಅವಶ್ಯಕತೆಯನ್ನು ಒತ್ತಿ ಹೇಳಿದ್ದು , ಈಗ ಜಾರಿಯಾಗಿರುವ ಕಾನೂನಿನಿಂದ ವಲಸೆ ಹೋಗುವಾಗ ಕುರಿ ಕಳ್ಳತನ, ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ ಎಸುಗುವ ಕೃತ್ಯಗಳನ್ನು ತಡೆಯುವ ಜೊತೆಗೆ ಭದ್ರತೆ ಕಲ್ಪಿಸಲು ತುಂಬಾ ಸಹಾಯವಾಗಲಿದೆ ಎಂದರು.
ಮುಖಂಡ ಮಲ್ಲು ಬಿದರಿ ಮಾತನಾಡಿದರು. ದೇವಕಾಂತ ಬಿಜ್ಜರಗಿ, ಪುಂಡಲೀಕ ಕಾಳೆ, ಮಲ್ಲಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಶಂಕರ್ ಪೂಜಾರಿ, ಸುಧಾಕರ್ ಕನಮಡಿ, ಸಂಜು ಕಂಬಾಗಿ, ಸವಿತಾ ವಗ್ಗರ್, ಸತೀಶ ಅಡವಿ, ಶೇಖರ ತೋಳಮಟ್ಟಿ, ರಾಜು ಕಗ್ಗೋಡ, ಅಮೋ ಬೂದಿಹಾಳ, ತುಕಾರಾಮ ಹೆಬ್ಬಾಲಟ್ಟಿ, ನಿಂಗಪ್ಪ ಪೂಜಾರಿ, ರಾಜು ಕಂಕನವಾಡಿ, ಸಾಬು ಹಂಜಗಿ, ಲಕ್ಕಪ್ಪ ಸಿಂದಗಿ, ಚಂದ್ರಶೇಖರ ಮಲ್ಕನ್ನವರ, ರಾಜು ಕಳ್ಳಿಮನಿ(ತಿಕೋಟ), ಅಮೋಗಿ ಪೂಜಾರಿ, ದಸಗೀರ ಶಾನವಾಲೆ, ಸುರೇಶ ಡಬ್ಬಾಳೆ, ಲಕ್ಷ್ಮಣ ದರಿಗೊಂಡ, ಸಿದ್ದರಾಯ ಪೂಜಾರಿ, ದಿವಾನ್ ಜಿ. ಕುಲಕರ್ಣಿ, ಸಾಹೇಬಗೌಡ ಬಿರಾದಾರ, ಪಿಂಟು ಮಾಲ್ಗಾರ, ಮಾಯಪ್ಪ ಪೂಜಾರಿ, ಕರೆಪ್ಪ ಧನಗೊಂಡ ಮತ್ತಿತರರಿದ್ದರು.