ಕ್ರೀಡೆ

ಕೆ.ಎಲ್​. ರಾಹುಲ್​ ವಿವಾದಾತ್ಮಕ ಔಟ್!​ ಥರ್ಡ್​ ಅಂಪೈರ್​ ವಿರುದ್ಧ ಮಾಜಿ ಕ್ರಿಕೆಟಿಗರ ಆಕ್ರೋಶ | KL Rahul

KL Rahul : ಇಂದಿನಿಂದ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಆರಂಭವಾಗಿದೆ. ಪರ್ತ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಔಟಾದ ಪರಿ ವಿವಾದಕ್ಕೆ ಕಾರಣವಾಗಿದೆ. ಥರ್ಡ್ ಅಂಪೈರ್‌ನ ತಪ್ಪು ನಿರ್ಧಾರದಿಂದ ಭಾರತ ತಂಡ ಭಾರೀ ಬೆಲೆ ತೆರುವಂತೆ ಮಾಡಿದೆ ಎಂದು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲಾಗಿ, ರಾಹುಲ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ (ನ.22) ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (0), ಒನ್​ಡೌನ್​ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (0) ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ (5) ಸಂಪೂರ್ಣವಾಗಿ ವಿಫಲರಾದರು. ಇಂತಹ ಘಳಿಗೆಯಲ್ಲಿ ಇನ್ನೋರ್ವ ಆರಂಭಿಕ ಬ್ಯಾಟ್ಸ್​ಮನ್ ಕೆಎಲ್ ರಾಹುಲ್ ಇನ್ನಿಂಗ್ಸ್ ಸುಧಾರಿಸಲು ಯತ್ನಿಸಿದರು.

ಆದರೆ, ಟೀಮ್​ ಇಂಡಿಯಾ ಇನಿಂಗ್ಸ್​ನ 23ನೇ ಓವರ್​ನಲ್ಲಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಚೆಂಡನ್ನು ಕಣಕ್ಕೆ ಇಳಿಸಿದರು. ರಾಹುಲ್, ಸ್ಟಾರ್ಕ್​ ಬೌಲಿಂಗ್​ನಲ್ಲಿ ಶಾಟ್ ಆಡಲು ಯತ್ನಿಸಿದಾಗ ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ಆಸೀಸ್ ಮೇಲ್ಮನವಿ ಸಲ್ಲಿಸಿದಾಗ ಮೈದಾನದಲ್ಲಿದ್ದ ಅಂಪೈರ್ ನಾಟೌಟ್ ನೀಡಿದರು. ಆದರೂ ಹಿಂದೆ ಸರಿಯದ ಆತಿಥೇಯ ತಂಡ ಥರ್ಡ್​ ಅಂಪೈರ್​ ಮೊರೆ ಹೋಗಿತ್ತು. ಈ ಕ್ರಮದಲ್ಲಿ ಮೂರನೇ ಅಂಪೈರ್ ರಾಹುಲ್ ಅವರನ್ನು ಔಟ್ ಎಂದು ಘೋಷಿಸಿದರು. ರೀಪ್ಲೇಯಲ್ಲಿ ವಿವಿಧ ಕೋನಗಳಿಂದ ಪರಿಶೀಲಿಸದೆ ಸ್ನೀಕ್ ಸ್ಪೈಕ್ ಬಂದಾಗ ಮಾತ್ರ ರಾಹುಲ್ ಅವರನ್ನು ಔಟ್ ಎಂದು ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಥರ್ಡ್​ ಅಂಪೈರ್ ಕೇವಲ ಒಂದು ಆಯಾಮದಲ್ಲಿ ನೋಡುವ ಮೂಲಕ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಟೀಕೆಗೆ ಕಾರಣವಾಗಿದೆ. ರಾಹುಲ್ ಕೂಡ ತೀವ್ರ ಅಸಮಾಧಾನದಿಂದ ಮೈದಾನ ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಥರ್ಡ್ ಅಂಪೈರ್ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಕೆಟ್ಟ ನಿರ್ಧಾರ. ಇದೊಂದು ದೊಡ್ಡ ಜೋಕ್ ಕೂಡ ಎಂದು ಮಾಜಿ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಕಿಡಿಕಾರಿದರು.

ಮತ್ತೊಂದೆಡೆ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಕೂಡ "ಆನ್ ಫೀಲ್ಡ್ ಅಂಪೈರ್ ನಿರ್ಧಾರವು ಔಟ್ ಆಗಿಲ್ಲ. ಆದರೆ ನೀವು ಅವರ ಕರೆಯನ್ನು ಸ್ಪಷ್ಟತೆ ಇಲ್ಲದೆ ಹೇಗೆ ತಿರಸ್ಕರಿಸುತ್ತೀರಿ. ಬ್ಯಾಟ್ ಪ್ಯಾಡ್‌ಗೆ ತಾಗುತ್ತಿರುವಂತೆ ತೋರುತ್ತಿದೆ. ಇದು ನಿಜಕ್ಕೂ ವಿಚಿತ್ರವಾಗಿದೆ. ಇದೊಂದು ಬುದ್ದಿಹೀನ ನಿರ್ಧಾರ ಎಂದು ಕಟುವಾಗಿ ಟೀಕಿಸಿದರು.

ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಕೂಡ ರಾಹುಲ್ ಪ್ರಕರಣದಲ್ಲಿ ಮೂರನೇ ಅಂಪೈರ್ ನಿರ್ಧಾರವನ್ನು ಟೀಕಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಮೊದಲ ದಿನದ ಆಟದ ಭಾಗವಾಗಿ 74 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿ ನಿರ್ಗಮಿಸಿದರು. ಸದ್ಯ ಟೀಮ್​ ಇಂಡಿಯಾ 46 ಓವರ್​ಗೆ 7 ವಿಕೆಟ್​ ನಷ್ಟಕ್ಕೆ 124 ರನ್​ ಗಳಿಸಿದೆ. (ಏಜೆನ್ಸೀಸ್​)