ಮುಂಬೈ: ಸವಾಲುಗಳನ್ನು ಎದುರಿಸಿ ನಿಲ್ಲುವುದು ಹೇಗೆ ಎಂಬ ಜೀವನಪಾಠವನ್ನು ಕಲಿಯುತ್ತಲೇ ಬೆಳೆದು ಬಂದವರು ಶ್ವೇತಾ ಶೆರ್ವೆಗಾರ್. ಮುಂಬೈನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅವರು ಎಲ್ಲ ರೀತಿಯ ಅಡೆತಡೆ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ನಿಂತು 2018ರ ಏಷ್ಯನ್ ಗೇಮ್ಸ್‌ನಲ್ಲಿ ಸೈಲಿಂಗ್ ಸ್ಪರ್ಧೆಯಲ್ಲಿ ರಜತ ಪದಕ ಜಯಿಸಿದ್ದರು. ಜತೆಗೆ ಹೋಮಿಯೋಪತಿ ವೈದ್ಯೆಯಾಗಿಯೂ ವೃತ್ತಿಜೀವನ ಕಂಡುಕೊಂಡಿದ್ದರು. ಇದೀಗ ಕರೊನಾ ವೈರಸ್ ವಿರುದ್ಧ ದೇಶದ ಹೋರಾಟದಲ್ಲಿ ಕೈಜೋಡಿಸಿರುವ 29 ವರ್ಷದ ಶ್ವೇತಾ ಶೆರ್ವೆಗಾರ್, ಕರೊನಾ ವಾರಿಯರ್ ಆಗಿ ಶ್ರಮಿಸುತ್ತಿದ್ದಾರೆ.
2018ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾಡ್‌ನ ಸೈಲಿಂಗ್ (ಹಾಯಿದೋಣಿ) 49ಇಆರ್ ವಿಭಾಗದ ಸ್ಪರ್ಧೆಯಲ್ಲಿ ವರ್ಷಾ ಗೌತಮ್ ಜತೆಗೂಡಿ ಶ್ವೇತಾ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ಗೂ ಅರ್ಹತೆ ಸಂಪಾದಿಸುವ ಹುರುಪಿನಲ್ಲಿದ್ದರು. ಆದರೆ ಒಲಿಂಪಿಕ್ಸ್ ಅರ್ಹತಾ ಕೂಟ ಮುಂದೂಡಿಕೆಯಾದ ಕಾರಣ ಅಭ್ಯಾಸ ನಿಲ್ಲಿಸಿದ್ದರು. ಈ ಸಮಯದಲ್ಲಿ ಕರೊನಾ ವೈರಸ್ ಹಾವಳಿ ಜೋರಾದ ಕಾರಣ ವೈದ್ಯೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
‘ಏಷ್ಯಾಡ್ ಬಳಿಕ ನಾನು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಗುರಿ ಹೊಂದಿದ್ದೆ. ಆದರೆ ಕ್ರೀಡಾಕೂಟಗಳಿಂದಾಗಿ ಅದರತ್ತ ಸಂಪೂರ್ಣವಾಗಿ ಗಮನಹರಿಸುವುದು ಸಾಧ್ಯವಾಗಿರಲಿಲ್ಲ. ಈಗ ಆ ಅವಕಾಶ ಕೂಡಿಬಂದಿದೆ. ಈ ಸಂಕಷ್ಟದ ಸಮಯದಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಬಯಸಿದ್ದೇನೆ. ವಿವಿಧ ಸಂಘಟನೆಗಳು ನನ್ನನ್ನು ಸಂಪರ್ಕಿಸಿದ್ದವು. ಅದರಂತೆ ನಾನು ಸ್ವಯಂಸೇವಕಿಯಾಗಿ ನೆರವು ಒದಗಿಸಲು ಮುಂದಾದೆ’ ಎಂದು ಶ್ವೇತಾ ಶೆರ್ವೆಗಾರ್ ತಿಳಿಸಿದ್ದಾರೆ.
‘ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಮಯದಲ್ಲಿ ಎಲ್ಲ ವೈದ್ಯರ ಗಮನ ಕೋವಿಡ್-19 ಸೋಂಕಿತರ ಮೇಲಿದೆ. ಹೀಗಾಗಿ ಹೃದಯ, ಸಕ್ಕರೆ, ಬಿಪಿ ಸಂಬಂಧಿತ ಸಮಸ್ಯೆಗಳನ್ನು ಹೊಂದಿರುವ ರೋಗಿಗಳ ಕಡೆಗಣನೆ ಆಗದಂತೆ ನಾನು ಗಮನಹರಿಸಿರುವೆ. ನಾನು ಪ್ರತಿದಿನ ದಕ್ಷಿಣ ಮುಂಬೈನ ವಿವಿಧ ಪ್ರದೇಶಗಳಿಗೆ ಹೋಗುತ್ತೇನೆ. ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇನೆ. ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಸುಮಾರು 200ರಿಂದ 300 ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತೇನೆ’ ಎಂದು ಶ್ವೇತಾ ಶೆರ್ವೆಗಾರ್ ತಿಳಿಸಿದ್ದಾರೆ.
‘ನೇರವಾಗಿ ಕರೊನಾ ಸೋಂಕಿತರಿಗೆ ನಾನು ಚಿಕಿತ್ಸೆ ನೀಡುತ್ತಿಲ್ಲ. ಆದರೆ ಶಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಇದರಿಂದ ಸೋಂಕಿತರನ್ನು ಆರಂಭದ ದಿನಗಳಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅವರಿಂದ ಇತತರಿಗೆ ಹರಡುವುದನ್ನು ತಪ್ಪಿಸಿದಂತಾಗುತ್ತದೆ’ ಎಂದು ಶ್ವೇತಾ ಹೇಳಿದ್ದಾರೆ. ಕಳೆದ 2 ತಿಂಗಳಿನಿಂದ ಅವರು ಆರೋಗ್ಯ ಸೇವೆಯಲ್ಲಿದ್ದಾರೆ. ಈ ನಡುವೆ ಅವರು ವಾಸಿಸುತ್ತಿರುವ ಕಟ್ಟಡದ 2 ಕುಟುಂಬ ಸದಸ್ಯರಿಗೆ ಕರೊನಾ ದೃಢಪಟ್ಟ ಕಾರಣ, ಶ್ವೇತಾ ಅವರೂ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು.
ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುವ ಹಂಬಲವನ್ನು ಇನ್ನೂ ಬಿಟ್ಟುಕೊಡದ ಶ್ವೇತಾ, ‘ನನಗೆ ಹಣಕಾಸು, ಪರಿಕರಗಳ ಕೊರತೆ ಮುಂತಾದ ಹಲವು ಸಮಸ್ಯೆಗಳಿವೆ. ಆದರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ನನಸಾಗಿಸಲು ಬದ್ಧವಾಗಿದ್ದೇನೆ’ ಎಂದು ಹೇಳಿದ್ದಾರೆ.