ದುಬೈ: ಐಸಿಸಿ ಪ್ರಸಕ್ತ ವರ್ಷ ಪರಿಚಯಿಸಿರುವ ಪ್ರತಿ ತಿಂಗಳ ಶ್ರೇಷ್ಠ ನಿರ್ವಹಣೆಗಾಗಿ ನೀಡಲಾಗುವ ಪ್ರಶಸ್ತಿಯು ಸತತ 2ನೇ ಮಾಸಿಕವೂ ಭಾರತೀಯರಿಗೆ ಒಲಿದಿದೆ. ಆಫ್-ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿಯ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತೋರಿದ ಅಮೋಘ ನಿರ್ವಹಣೆಗಾಗಿ ಅವರಿಗೆ ಈ ಗೌರವ ಲಭಿಸಿದೆ. ಜನವರಿ ತಿಂಗಳಲ್ಲಿ ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಆಡಿದ್ದ ಅಶ್ವಿನ್ ಚೆನ್ನೈನ 2ನೇ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸಿದ್ದರು. ಜತೆಗೆ ಮೊದಲ 3 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದರು. ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 400 ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಪೂರೈಸಿದ ಸಾಧನೆ ಮಾಡಿದ್ದರು. ಅಂತಿಮವಾಗಿ ಭಾರತ 3-1ರಿಂದ ಗೆದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡ ಈ ಸರಣಿಯಲ್ಲಿ ಅಶ್ವಿನ್ ಒಟ್ಟು 32 ವಿಕೆಟ್ ಮತ್ತು 189 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಇದರೊಂದಿಗೆ ಅಶ್ವಿನ್ ಕ್ರಿಕೆಟ್ ಪ್ರೇಮಿಗಳಿಂದ ಅತ್ಯಧಿಕ ಮತಗಳನ್ನು ಪಡೆದು ವಿಜೇತರಾಗಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ವೆಸ್ಟ್ ಇಂಡೀಸ್‌ನ ಕೈಲ್ ಮೇಯರ್ಸ್ ಈ ಪ್ರಶಸ್ತಿ ರೇಸ್‌ನಲ್ಲಿದ್ದರು. ಮಹಿಳೆಯರ ವಿಭಾಗದಲ್ಲಿ ಇಂಗ್ಲೆಂಡ್‌ನ ಟಾಮಿ ಬೆಯುಮಂಟ್ ಐಸಿಸಿಯ ಫೆಬ್ರವರಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಯುಮಂಟ್ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ 3 ಏಕದಿನ ಪಂದ್ಯಗಳಲ್ಲಿ 231 ರನ್ ಬಾರಿಸಿದ್ದರು.