ಕ್ರೀಡೆ

ಇವರ ಬೌಲಿಂಗ್​ನಲ್ಲಿ ಬ್ಯಾಟ್​ ಮಾಡೋದು ಅಷ್ಟು ಸುಲಭವಲ್ಲ; ಅಭಿಷೇಕ್ ಶರ್ಮಾ ಹೆಸರಿಸಿದ ಸ್ಟಾರ್ ಬೌಲರ್ ಯಾರು?

ಮುಂಬೈ: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸನ್​ರೈಸರ್ಸ್​ ಹೈದರಾಬಾದ್ ತಂಡವು ಇದೀಗ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಇಂದು (ಮೇ.21) ನಡೆಯುವ ಕ್ವಾಲಿಫೈರ್ 1ರಲ್ಲಿ ಕೆಕೆಆರ್​ ವಿರುದ್ಧ ಫೈನಲ್ ಪ್ರವೇಶಕ್ಕಾಗಿ ಭಾರೀ ಪೈಪೋಟಿ ನಡೆಸಲಿದೆ. ಸದ್ಯ ಈ ವಿಷಯವು ಎಸ್​ಆರ್​ಎಚ್ ಅಭಿಮಾನಿಗಳಿಗೆ ಭಾರೀ ಸಂಸತ ನೀಡಿದ್ದು, ತಮ್ಮ ನೆಚ್ಚಿನ ತಂಡ ಪ್ಲೇಆಫ್ ಗೆದ್ದು ಬರಲಿ ಎಂದು ಆಶಿಸಿದ್ದಾರೆ.

ಇನ್ನು ಈ ಸೀಸನ್​ನಲ್ಲಿ ಟ್ರಾವಿಸ್​ ಹೆಡ್​ ಜತೆಗೆ ತಂಡದ ಪರ ಓಪನಿಂಗ್ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದು, ಇಲ್ಲಿಯವರೆಗೆ ಆಡಿದ 13 ಪಂದ್ಯಗಳಲ್ಲಿ 467 ರನ್​ ಕಲೆಹಾಕಿದ್ದಾರೆ. ಐಪಿಎಲ್​ನ 10 ಬಲಿಷ್ಠ ತಂಡಗಳ ಸ್ಟಾರ್​ ಬೌಲರ್​ಗಳನ್ನು ಎದುರಿಸಿರುವ ಶರ್ಮಾ, 17ನೇ ಆವೃತ್ತಿಯಲ್ಲಿ ನಾನು ಎದುರಿಸಿದ ಕಠಿಣ ಬೌಲರ್​ ಮುಂಬೈ ಇಂಡಿಯನ್ಸ್ ತಂಡದವರು ಎಂದಿದ್ದಾರೆ.

ತಮಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಭಿಷೇಕ್ ಮತ್ತು ಹೆನ್ರಿಚ್ ಕ್ಲಾಸೆನ್​, ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ನಾವು ಕಂಡಂತಹ ಅತ್ಯಂತ ಕಠಿಣ ಬೌಲರ್. ಅವರ ಓವರ್​ನಲ್ಲಿ ಹೆಚ್ಚು ರನ್ ಗಳಿಸಲು ಬಹಳ ಕಷ್ಟವಾಗುತ್ತಿತ್ತು. ಬುಮ್ರಾ ಬೌಲಿಂಗ್ ದಾಳಿಗೆ ಬ್ಯಾಟ್ ಮಾಡುವುದು ಅಷ್ಟು ಸುಲಭವಲ್ಲ. ಖಂಡಿತ ಅದೊಂದು ರೀತಿ ಚಾಲೆಂಜ್ ಎಂದರು.

ಇನ್ನು ಕ್ಲಾಸೆನ್ ಹೇಳಿಕೆಗೆ ಸಮ್ಮತಿ ಸೂಚಿಸಿದ ಅಭಿಷೇಕ್, “ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಬಾಲ್​ನ ಬೌನ್ಸ್ ಮಾಡುವುದರ ಜತೆಗೆ ಯಾರ್ಕರ್ ಕೂಡ ಮಾಡುತ್ತಾರೆ. ಇವರು ಹೇಗೆ ಬೌಲ್ ಮಾಡುತ್ತಾರೆ ಅನ್ನೋದನ್ನು ಊಹಿಸಲು ಬ್ಯಾಟ್ಸ್‌ಮನ್‌ಗೆ ಸವಾಲಿನ ಸಂಗತಿಯೇ ನಿಜ. ಆದ್ದರಿಂದ ಜಸ್ಪ್ರೀತ್ ಬುಮ್ರಾ ನನ್ನ ಆಯ್ಕೆಯೂ ಹೌದು" ಎಂದಿದ್ದಾರೆ,(ಏಜೆನ್ಸೀಸ್).